July 15, 2026
Wednesday, July 15, 2026
spot_img

ಕಲಬುರಗಿ ಕೇಂದ್ರ ಕಾರಾಗೃಹ ಪರಾರಿ ಪ್ರಕರಣ : ಆರೋಪಿ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ, ಆತ್ಮರಕ್ಷಣೆಗಾಗಿ ಫೈರಿಂಗ್

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಶಿಕ್ಷಿತ ಕೈದಿಗಳ ಪೈಕಿ ಒಬ್ಬನನ್ನು ಬಂಧಿಸುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ ಘಟನೆ ಹುಮನಾಬಾದ್ ಸಮೀಪ ನಡೆದಿದೆ.

ಈ ಕುರಿತು ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾಹಿತಿ ನೀಡಿದ್ದು, ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾದ ಪ್ರಕರಣ ದಾಖಲಿಸಿಕೊಂಡು, ಅವರನ್ನು ಪತ್ತೆಹಚ್ಚಲು ಹಲವು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ತಿಳಿಸಿದರು.

ಬುಧವಾರ ಬೆಳಿಗ್ಗೆ ಹುಮನಾಬಾದ್ ರಿಂಗ್‌ರೋಡ್ ಕೈಗಾರಿಕಾ ಪ್ರದೇಶದ ಬಳಿ ಪರಾರಿಯಾಗಿದ್ದ ಓರ್ವ ಆರೋಪಿ ಸಂಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ವಿಶೇಷ ತಂಡ ಆರೋಪಿಯನ್ನು ಪತ್ತೆಹಚ್ಚಿ ಶರಣಾಗಲು ಸೂಚಿಸಿತು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮತ್ತು ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯ ಬಲಗಾಲಿಗೆ ಗಾಯವಾಗಿದೆ.

ಗಾಯಗೊಂಡ ಆರೋಪಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇದೇ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು. ಕೇಂದ್ರ ಕಾರಾಗೃಹದಿಂದ ಪರಾರಿಯಾಗಿರುವ ಉಳಿದ ಇಬ್ಬರು ಕೈದಿಗಳ ಪತ್ತೆಗೆ ವಿಶೇಷ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !