April 15, 2026
Wednesday, April 15, 2026
spot_img

ಕೊತ ಕೊತ ಕುದಿಯುತ್ತಿದೆ ಕಲಬುರಗಿ: ದೇಶದಲ್ಲೇ ಅತ್ಯಧಿಕ ದಾಖಲೆಯ ತಾಪಮಾನ ಬರೆದ ‘ಬಿಸಿ ಜಿಲ್ಲೆ’

ಹೊಸದಿಗಂತ ವರದಿ ಕಲಬುರಗಿ:

ಏ.14 ಮಂಗಳವಾರದಂದು ಕಲಬುರಗಿಯಲ್ಲಿ ದೇಶದಲ್ಲೇ ಅತ್ಯಧಿಕವಾದ 44.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ತೀವ್ರ ಬಿಸಿಗಾಳಿಯ ಹಿನ್ನೆಲೆ ಜಿಲ್ಲೆಯಲ್ಲಿ ಉಷ್ಣಾಂಶವು ಗಣನೀಯವಾಗಿ ಏರಿಕೆಯಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ 17ರವರೆಗೆ ಜಿಲ್ಲೆಯಲ್ಲಿ ಹೀಟ್ ವೇವ್ ಇರುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನವು ಕ್ಷಣ ಕ್ಷಣವೂ ಹೆಚ್ಚುತ್ತಿರುವ ಪ್ರವೃತ್ತಿ ಕಂಡುಬಂದಿದ್ದು,ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೂ ಮೀರಿ ದಾಖಲಾಗಿದೆ.ಏ.14 ಮಂಗಳವಾರದಂದು ರಾಜ್ಯದ ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿಯಲ್ಲಿ ಅತ್ಯಧಿಕ ಸರಾಸರಿ ಗರಿಷ್ಠ ತಾಪಮಾನ 44.30˚C ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದು ಉಷ್ಣತೆಯ ತೀವ್ರತೆ ಸೂಚಿಸುತ್ತಿದೆ.

ಇದನ್ನೂ ಓದಿ:

ರಾಜ್ಯದ ಭೌಗೋಳಿಕ ಪ್ರದೇಶದ ಸುಮಾರು 79.5 ಶೇಕಡಾ ಭಾಗದಲ್ಲಿ ಗರಿಷ್ಠ ತಾಪಮಾನ 36˚C ರಿಂದ 42˚C ನಡುವೆಯೇ ದಾಖಲಾಗಿದ್ದು,ಬೇಸಿಗೆ ಬಿಸಿಯ ತೀವ್ರತೆ ಹೆಚ್ಚುತ್ತಿರುವುದನ್ನು ಹವಾಮಾನ ಇಲಾಖೆ ಸೂಚಿಸಿದೆ.ರಾಜ್ಯದ ತುಮಕೂರು ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ರಾಯಚೂರು,ಕಲಬುರಗಿ,ಬೀದರ್,ಯಾದಗಿರಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ,ಜಿಲ್ಲೆಗಳ ಕೆಲವು ಭಾಗಗಳಲ್ಲಿ 42˚C ರಿಂದ 44.30˚C ನಡುವೆ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದಕ್ಕೆ ವಿರುದ್ಧವಾಗಿ,ಕನಿಷ್ಠ ತಾಪಮಾನವು ಕೆಲವು ಪ್ರದೇಶಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದ್ದು, ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ 12.10˚C ಕನಿಷ್ಠ ಸರಾಸರಿ ತಾಪಮಾನ ದಾಖಲಾಗಿದೆ.ರಾಜ್ಯದ 79.6 ಶೇಕಡಾ ಪ್ರದೇಶದಲ್ಲಿ ಕನಿಷ್ಠ ತಾಪಮಾನ 22˚C ರಿಂದ 28˚C ನಡುವೆ ದಾಖಲಾಗಿದ್ದು,ವಿಜಯನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ 12.10˚C ರಿಂದ 14˚C ನಡುವೆ ಕನಿಷ್ಠ ತಾಪಮಾನ ಕಂಡುಬಂದಿದೆ.

ಏಪ್ರಿಲ್ 13ರ ಬೆಳಿಗ್ಗೆ 8:30ರಿಂದ ಏಪ್ರಿಲ್ 14ರ ಬೆಳಿಗ್ಗೆ 8:30ರವರೆಗೆ ಸಂಗ್ರಹಿಸಿದ ಈ ಅಂಕಿ-ಅಂಶಗಳು ರಾಜ್ಯದಲ್ಲಿ ಹವಾಮಾನ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತವೆ. ಮುಂದಿನ ದಿನಗಳಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !