ರಣಬಿಸಿಲಿಗೆ ಹೈರಾಣಾದ ಕಲಬುರಗಿ ಮಂದಿ: ಗರಿಷ್ಟ 42 ಡಿಗ್ರಿ ದಾಟಿದ ತಾಪಮಾನ

ರಾಚಪ್ಪಾ ಜಂಬಗಿ

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಕಾವು ಕಡಿಮೆಯಾಗುತ್ತಿದ್ದಂತೆ, ಇದೀಗ ರಣಬಿಸಿಲಿನ ಕಾವು ಏರತೊಡಗಿದೆ. ಗರಿಷ್ಠ 42 ಡಿಗ್ರಿ ದಾಟಿದ ಬಿಸಿಲಿನ ಝಳಕ್ಕೆ ಕಲಬುರಗಿ ಮಂದಿ ಅಕ್ಷರಶಃ ಕಂಗಾಲಾಗಿದ್ದಾರೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಕೊಡೆ, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕಳೆದ 5 ದಿನಗಳಿಂದ 40 ಡಿಗ್ರಿಗಿಂತ ಅತೀ ಹೆಚ್ಚಿನ ಬಿಸಿಲು ಜಿಲ್ಲೆಯಲ್ಲಿ ದಾಖಲಾಗಿದ್ದು, ಈ ಪರಿಯ ಬಿಸಿಲಿನ ಝಳದ ಪರಿಣಾಮ ಕಲಬುರಗಿ ಜನರು ಹೈರಾಣಾಗುತ್ತಿದ್ದಾರೆ.

ಹೌದು, ಕಲ್ಯಾಣ ಕರ್ನಾಟಕ ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದ್ದು, ರಣಬಿಸಿಲಿನ ಆರ್ಭಟ ಜೋರಾಗಿದೆ. ಬೆಳಿಗ್ಗೆ 10 ಗಂಟೆಯಾಗುವುದೇ ತಡ, ಬಿಸಲಿನ ಝಳ ಜನರಿಗೆ ತಾಕುತ್ತಿದೆ. ಈ ಮಧ್ಯೆ ಮೈಯಿಂದ ನಿರಂತರ ಬೆವರು ಸುರಿಯುತ್ತಿರುವುದರಿಂದ ಬಿಸಿಲಿನ ಕಿರಿಕಿರಿ ಕಂಗಾಲಾಗುವಂತೆ ಮಾಡಿದೆ.

ಮುಂದಿನ 3 ದಿನಗಳ ಕಾಲ ಅತೀ ಹೆಚ್ಚು ಬಿಸಿಲು

ಹವಾಮಾನ ಇಲಾಖೆಯ ವರದಿಯಂತೆ ಮುಂದಿನ ಮೂರು ದಿನಗಳು ಜಿಲ್ಲೆಯಲ್ಲಿ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಬಿಸಿ ಗಾಳಿ ಬಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನತೆ ಬಿಸಿಲಿನ ತಾಪಮಾನದಿಂದ ಬಚಾವ್ ಮಾಡಿಕೊಳ್ಳಲು ಕೆಲವು ಮುಂಜಾಗೃತಾ ಕ್ರಮಗಳನ್ನು ಅನುಸರಿಸಲು ಸಲಹೆ ನೀಡಿದೆ. ಬೇಸಿಗೆ ಪ್ರಾರಂಭವಾಗುವುದೇ ತಡ ಜನರು ತಂಪು ಪಾನೀಯಗಳಾದ ಮಜ್ಜಿಗೆ, ಜೂಸ್, ಕೋಲ್ಡ್‌ ಡ್ರಿಂಕ್ ಗೆ ಮೊರೆ ಹೋಗಿದ್ದು,ಮಧ್ಯಾಹ್ನ ಆಗುವುದೇ ತಡ ಜ್ಯೂಸ್ ಅಂಗಡಿಗಳ ಮುಂದೆ‌ ಜನರ ಸಾಲು ಕಂಡುಬರುತ್ತಿದೆ.

ಜಿಲ್ಲೆಯಲ್ಲಿ ಮುಂದಿನ ಒಂದು ವಾರದ ಬಿಸಿಲಿನ ತಾಪಮಾನ

ಮೇ-17ರಂದು 41.0 ಡಿಗ್ರಿ.

ಮೇ-18ರಂದು 41.0 ಡಿಗ್ರಿ.

ಮೇ-19ರಂದು 41.0 ಡಿಗ್ರಿ.

ಮೇ-20ರಂದು 42.0 ಡಿಗ್ರಿ.

ಮೇ-21ರಂದು 42.0 ಡಿಗ್ರಿ.

ಮೇ-22ರಂದು 42.0 ಡಿಗ್ರಿ.

ಮೇ-23ರಂದು 42.0 ಡಿಗ್ರಿಗಿಂತ ಅಧಿಕ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!