ಸಿದ್ದಗಂಗಾ ಶ್ರೀಗಳ ಆದರ್ಶ ಯುವ ಜನಾಂಗಕ್ಕೆ ಮಾದರಿ: ಮಹಾಂತ ಶಿವಲಿಂಗ ಸ್ವಾಮೀಜಿ

ಹೊಸದಿಗಂತ ವರದಿ,ಸೋಮವಾರಪೇಟೆ:

ಸಿದ್ದಗಂಗಾ ಶ್ರೀಗಳ ತತ್ವ,ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಲಿ ಎಂದು ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಆಶಿಸಿದರು.
ಶಿವಕುಮಾರ ಜಯಂತ್ಯುತ್ಸವ ಸಮಿತಿ, ವೀರಶೈವ ಸಮಾಜ ಹಾಗೂ ಪಟ್ಟಣದ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ದಿನದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ದಾಸೋಹ ದಿನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶಿವಕುಮಾರ ಸ್ವಾಮೀಜಿ ಕಾಯಕ ನಿಷ್ಠೆ ಮೈಗೂಡಿಸಿ ಕೊಂಡವರು.ತಮ್ಮ ಇಳಿವಯಸ್ಸಿನಲ್ಲಿಯೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರೆಂದು ಬಣ್ಣಿ ಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುದ್ದಿನ ಕಟ್ಟೆ ಮಠಾಧೀಶ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಹಳ್ಳಿ, ಅಲೆದು ದವಸ ಧಾನ್ಯ ಬೇಡಿ ಪಡೆದು ಮಠದ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಿ,ಅವರಿಗೆ ಆಶ್ರಯ ನೀಡಿ,ಅಕ್ಷರ ಕಲಿಸುವ ಮೂಲಕ ತ್ರಿವಿಧ ದಾಸೋಹಿ ಎನ್ನಿಸಿಕೊಂಡರು ಎಂದರು.
ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಗೋವಿಂದ ರಾಜು ಮಾತನಾಡಿ ಮನುಷ್ಯ ಹುಟ್ಟೋದು ಮುಖ್ಯವಲ್ಲ. ಹೇಗೆ ಬದುಕಿದ ಅನ್ನೋದು ಮುಖ್ಯ ಇದಕ್ಕೆ ಶಿವಕುಮಾರ ಸ್ವಾಮೀಜಿ ಉದಾಹರಣೆ. ತಾವು ಕಷ್ಟದಲ್ಲಿದ್ದರೂ ಭಿಕ್ಷೆ ಬೇಡಿ ಮಠದ ಮಕ್ಕಳಿಗೆ ಊಟ ಕೊಡುತ್ತಿದ್ದರು ಎಂದರು.ಇಂದಿಗೂ ಸಿದ್ದಗಂಗಾ ಮಠದಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಅನ್ನ,ಆಶ್ರಯ ಪಡೆಯುವ ಮೂಲಕ ಶಿಕ್ಷಣ ಪಡೆಯುತ್ತಿರುವುದು ಗಮನಾರ್ಹವೆಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್, ವೀರಶೈವ ಸಮಾಜದ ಪ್ರಮುಖರಾದ ಶಿವಣ್ಣ, ಮೃತ್ಯುಂಜಯ, ನಾಗರಾಜ್, ಮಹೇಶ್, ರಮೇಶ್, ಶೇಖರ್, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಶ್ರೀ ಮಾತಾ, ಚಾಮುಂಡೇಶ್ವರಿ,ಸೀತಾ ಬಳಗದ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ದಾಸೋಹ ದಿನದ ಅಂಗವಾಗಿ ರುದ್ರಾಭಿಷೇಕ, ಅಷ್ಟೋತ್ತರ, ಪುಷ್ಪಾರ್ಚನೆ ಜರಗಿತು. ಮಹಾಮಂಗಳಾರತಿ ನಂತರ ದಾಸೋಹ ನೆರವೇರಿತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!