October 9, 2026
Friday, October 9, 2026
spot_img

ಪ್ರತಿಭಟನೆ ನೆಪದಲ್ಲಿ ದೆಹಲಿ ಮೆಟ್ರೋ ಸೇವೆ ಸಂಪೂರ್ಣ ಬಂದ್ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಾಗಿರುವ ಬೆನ್ನಲ್ಲೇ, ಸಾಮಾನ್ಯ ಜನರ ಸಂಚಾರದ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಅ.10 ರಂದು CJP ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಮತ್ತು ರೈಲು ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾರ್ವಜನಿಕರಗೆ ತೊಂದರೆಯಾಗಬಾರದು

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ತುರ್ತು ಅರ್ಜಿಯ ವಿಚಾರಣೆ ನಡೆಸಿತು. ಭದ್ರತಾ ಕ್ರಮಗಳು ಸಾರ್ವಜನಿಕರ ದೈನಂದಿನ ಜೀವನಕ್ಕೆ ಅನಗತ್ಯವಾಗಿ ಅಡ್ಡಿಪಡಿಸಬಾರದು ಎಂದು ಒತ್ತಿಹೇಳಿದ ಪೀಠವು, ‘ಮೆಟ್ರೋ ಸಂಚಾರದ ಮೇಲೆ ಸಂಪೂರ್ಣ ನಿಷೇಧ ಹೇರಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ದೆಹಲಿ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನಿಯಂತ್ರಿತ ಶೈಲಿಯಲ್ಲಿ ಮೆಟ್ರೋ ಮತ್ತು ರೈಲು ಓಡಾಟಕ್ಕೆ ಅವಕಾಶ ನೀಡಬೇಕು’ ಎಂದು ಆದೇಶಿಸಿತು.

57 ಮೆಟ್ರೋ ನಿಲ್ದಾಣಗಳ ಬಂದ್ ಭೀತಿ

ಇದಕ್ಕೂ ಮುನ್ನ ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಇಂದು ರಾತ್ರಿ 9 ಗಂಟೆಯಿಂದಲೇ ನಗರದ ಸುಮಾರು 57 ಪ್ರಮುಖ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲು ಯೋಜಿಸಿದ್ದರು. ಅಷ್ಟೇ ಅಲ್ಲದೆ, ನಾಳೆ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಬಂದು ತಲುಪಬೇಕಾಗಿದ್ದ ಹಲವು ಪ್ರಮುಖ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಸರ್ಕಾರದ ಈ ಕಠಿಣ ನಿರ್ಧಾರವನ್ನು ಕೋರ್ಟ್‌ನಲ್ಲಿ ಬಲವಾಗಿ ಪ್ರಶ್ನಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಧರಣಿಯು ಶಾಂತಿಯುತವಾಗಿದೆ ಎಂದು ವಾದಿಸಿದರು.

ಇದನ್ನೂ ಓದಿ:

ಬದಲಿ ಮಾರ್ಗಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ

ಸುಪ್ರೀಂ ಕೋರ್ಟ್‌ನ ತರಾಟೆಯ ಬೆನ್ನಲ್ಲೇ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪ್ರಯಾಣಿಕರಿಗೆ ತೊಂದರೆಯಾಗದಂತೆ ನಿಯಂತ್ರಿತ ರೂಪದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ಒಪ್ಪಿಕೊಂಡರು. ಇದರೊಂದಿಗೆ, ರಸ್ತೆ ಬ್ಯಾರಿಕೇಡ್‌ಗಳು, ಸಂಚಾರ ನಿರ್ಬಂಧಗಳು ಹಾಗೂ ಬದಲಿ ಮಾರ್ಗಗಳ ಕುರಿತು ಪತ್ರಿಕೆಗಳು, ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಜನರಿಗೆ ಮುಂಚಿತವಾಗಿಯೇ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸಬೇಕು ಎಂದು ನ್ಯಾಯಾಲಯವು ಕಟ್ಟುನಿಟ್ಟಾಗಿ ಆದೇಶಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಖಂಡಿಸಿ ಶನಿವಾರ ನಡೆಯಲಿರುವ ಈ ಬೃಹತ್ ಪ್ರತಿಭಟನೆಯ ನಡುವೆ, ಸುಪ್ರೀಂ ಕೋರ್ಟ್‌ನ ಈ ಆದೇಶವು ದೆಹಲಿ ಹಾಗೂ ಎನ್‌ಸಿಆರ್ ವ್ಯಾಪ್ತಿಯ ಲಕ್ಷಾಂತರ ದೈನಂದಿನ ಪ್ರಯಾಣಿಕರಿಗೆ ನಿರಾಳತೆ ತಂದಿದೆ.

Must Read

Skip to toolbar