ವ್ಯಕ್ತಿ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಕಾಂಗರೂ: 86 ವರ್ಷಗಳಲ್ಲೇ ಮೊದಲ ಘಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಡಿನಲ್ಲಿದ್ದ ಕಾಂಗರೂವನ್ನು ಹಿಡಿದುತಂದು ಸಾಕುಪ್ರಾಣಿಯಾಗಿ ಸಾಕುತ್ತಿದ್ದ 77 ವರ್ಷದ ವ್ಯಕ್ತಿಯನ್ನು ಅದೇ ಕಾಂಗರೂ ದಾಳಿನಡೆಸಿ ಕೊಂದುಹಾಕಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ.
86 ವರ್ಷಗಳಲ್ಲಿ ಮೊದಲಬಾರಿ ಕಾಂಗರೂಗಳಿಂದ ಇಂತಹದ್ದೊಂದು ಮಾರಣಾಂತಿಕ ದಾಳಿ ನಡೆದಿದೆ ಎಂದು ವರದಿಯಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ಪಟ್ಟಣವಾದ ರೆಡ್‌ಮಂಡ್‌ನಲ್ಲಿರುವ ಜಮೀನೊಂದರಲ್ಲಿ ವ್ಯಕ್ತಿಯೊಬ್ಬ ಗಂಭೀರ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ನೋಡಿದ ಆತನ ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿಯ ಮೇಲೆ ಹಿಂದಿನ ದಿನ ಕಾಂಗರೂ ದಾಳಿ ಮಾಡಿತ್ತು ಎಂದು ನಂಬಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಓಡಿದರು, ಆದರೆ ವ್ಯಕ್ತಿ ಅಲ್ಲಿಯೇ ಸಾವನ್ನಪ್ಪಿದ. ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಆಂಬ್ಯುಲೆನ್ಸ್ ಸಿಬ್ಬಂದಿಯನ್ನು ಕಾಂಗರೂ ತಡೆದಿತ್ತು. ತುರ್ತು ಪ್ರತಿಕ್ರಿಯೆ ಸಂದರ್ಭದಲ್ಲಿ ಅಡ್ಡಿಪಡಿಸಿದ್ದರಿಂದ ಕಾಂಗರೂವನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಾದ ಗ್ರೇಟ್ ಸದರ್ನ್ ಪ್ರದೇಶವು ಪಶ್ಚಿಮ ಬೂದು ಬಣ್ಣದ ಕಾಂಗರೂಗಳ ನೆಲೆಯಾಗಿದೆ. ಗಂಡು ಬೂದು ಕಾಂಗರೂಗಳು 2.2 ಮೀಟರ್ (ಏಳು ಅಡಿಗಿಂತ ಹೆಚ್ಚು) ಉದ್ದ ಮತ್ತು 70 ಕೆಜಿ (154 ಪೌಂಡ್) ವರೆಗೆ ಬೆಳೆಯುತ್ತದೆ. 1936 ರಲ್ಲಿ ಕಾಂಗರೂ ಕೊನೆಯ ಮಾರಣಾಂತಿಕ ದಾಳಿ ನಡೆಸಿದ್ದು ವರದಿಯಾಗಿತ್ತು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ಹೇಳಿವೆ.
ಆಗ ನಡೆದಿದ್ದ ಘಟನೆಯಲ್ಲಿ, 38 ವರ್ಷದ ವಿಲಿಯಂ ಕ್ರೂಕ್‌ಶಾಂಕ್ ಎಂಬಾತ ನ್ಯೂ ಸೌತ್ ವೇಲ್ಸ್‌ನಲ್ಲಿ  ದೊಡ್ಡ ಕಾಂಗರೂನಿಂದ ಎರಡು ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಕಾಂಗರೂವಿನಿಂದ ಪೆಟ್ಟುತಿಂದು ಸಾವನ್ನಪ್ಪಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!