ಕನ್ನಡ ಸಾಹಿತ್ಯ ಸಮ್ಮೇಳನ: ನಗರದ ಗೋಡೆಗಳಿಗೆ ವರ್ಲಿಕಲೆ ಚಿತ್ತಾರ, ದಸರಾ ಮಾದರಿ ದೀಪಾಲಂಕಾರ

ಹೊಸದಿಗಂತ ವರದಿ,ಹಾವೇರಿ:

ಹಾವೇರಿ ನಗರದಲ್ಲಿ ಜನವರಿ ೬ ರಿಂದ ೮ರವರೆಗೆ ನಡೆಯುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾವೇರಿ ನಗರದ ಮುಖ್ಯ ಬೀದಿಗಳ ಗೋಡೆಗಳಿಗೆ ವರ್ಲಿಕಲೆಯ ಚಿತ್ತಾರದ ಜೊತೆಗೆ ದಸರಾ ಮಾದರಿಯಲ್ಲಿ ದೀಪಾಲಂಕಾರಗೊಳಿಸಲು ತೀರ್ಮಾನಿಸಲಾಯಿತು.
ಹಾವೇರಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಮಾಜಿ ಶಾಸಕ ಶಿವರಾಜ ಸಜ್ಜನರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ನಗರ ಅಲಂಕಾರ ಹಾಗೂ ವಿದ್ಯುತ್ ಅಲಂಕಾರ ಉಪ ಸಮಿತಿ ಸಭೆಯಲ್ಲಿ ವಿವಿಧ ಸದಸ್ಯರು ನೀಡಿದ ಸಲಹೆಗಳನ್ನು ಸ್ವೀಕರಿಸಿ ಅಂತಿಮಗೊಳಿಸಲಾಯಿತು.
ಮೈಸೂರ ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರಗೊಳಿಸಲು ತೀರ್ಮಾನಿಸಲಾಯಿತು. ಮೈಸೂರ ದಸರಾದಲ್ಲಿ ಅಲಂಕಾರ ಮಾಡಿದ ಸಂಸ್ಥೆಯಿಂದಲೇ ಹಾವೇರಿಯಲ್ಲಿ ದೀಪಾಲಂಕಾರಗೊಳಿಸಲು ಎಂಸಿಎ ಸಂಸ್ಥೆಗೆ ವಹಿಸಲು ಸಭೆಯಲ್ಲಿ ಅಂತಿಮಗೊಳಿಸಲಾಯಿತು.
ಹುಕ್ಕೇರಿಮಠ, ಗುತ್ತಲ ರಸ್ತೆ ಮಾರ್ಗ, ತೋಟದ ಯಲ್ಲಾಪೂರ ಮಾರ್ಗ, ಹಾನಗಲ್ ಬೈಪಾಸ್‌ವರೆಗೆ, ಕಾಗಿನೆಲೆ ಬೈಪಾಸ್, ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಮಾರ್ಗ, ಹಳೆ ಅಂಚೆ ಕಚೇರಿ ಮಾರ್ಗ, ಹಳೆ ಪಿಬಿ ರಸ್ತೆ, ಎಂಪಿಎಂಸಿ ಮಾರ್ಗ ಸೇರಿದಂತೆ ನಗರದ ವಿವಿಧ ವೃತ್ತಗಳಲ್ಲಿ ದೀಪಾಲಂಕಾರಗೊಳಿಸಲು ನಿರ್ಧರಿಸಲಾಯಿತು.
ನಗರದ ಡಿವೈಡರ್‌ಗಳಿಗೆ ಕಪ್ಪು ಹಳದಿ ಬಣ್ಣ ಬಳಿಯಲು, ನಗರದ ಎಲ್ಲ ವೃತ್ತಗಳಿಗೆ ವಿದ್ಯುತ್ ಕಂಬಗಳಿಗೆ, ಡಿವೈಡರ್ ಕಂಬಗಳಿಗೆ ವಿಶೇಷ ಹೂವಿನ ಅಲಂಕಾರ, ಕನ್ನಡ ಧ್ವಜದ ಮಾದರಿಯಲ್ಲಿ ಕೆಂಪು-ಹಳದಿ ಬಟ್ಟೆಯಿಂದ ಶೃಂಗಾರ ಹಾಗೂ ಕಾಂಪೌಂಡ್ ಗೋಡೆಗಳ ಮೇಲೆ ವರ್ಲಿಕಲೆ ಜೊತೆಗೆ ಚಿತ್ರಕಲಾ ಬರಹ ಬಿಡಿಸಲು ಹಾಗೂ ಒಂದು ಸಾವಿರ ಕನ್ನಡ ಧ್ವಜಗಳನ್ನು ನಗರದ ವಿವಿಧೆಡೆ ಪ್ರದರ್ಶನಕ್ಕೆ ಸಮಿತಿಯಲ್ಲಿ ಅಂತಿಮಗೊಳಿಸಲಾಯಿತು.
ಹಾವೇರಿ ನಗರದಲ್ಲಿರುವ ಪ್ರಮುಖ ಪ್ರವೇಶ ಮಾರ್ಗದಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಿಲು ನಿರ್ಧರಿಸಲಾಯಿತು ಹಾಗೂ ನಗರದ ಬಸ್ ನಿಲ್ದಾಣದ ಮೇಲ್ಸೆತುವೆಗೆ ಫೆಕ್ಸ್‌ಬೋರ್ಡ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋಗಳು, ಹೂವಿನ ಅಲಂಕಾರಗೊಳಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ವಿವಿಧ ಸದಸ್ಯರು, ಸಮಿತಿಯ ಸದಸ್ಯ ಕಾರ್ಯದರ್ಶಿ ಹೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರದೀಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿರಕ್ತಮಠ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ಸಮಿತಿ ಸದಸ್ಯರುಗಳು, ಪೌರಾಯುಕ್ತರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!