Thursday, March 30, 2023

Latest Posts

ವಿಶ್ವಸಂಸ್ಥೆಯಲ್ಲಿ ಕನ್ನಡದ ಕಂಪು: ಕಾಂತಾರ ಹೀರೋನ ಪರಿಸರ ಕಾಳಜಿಗೆ ಎಲ್ಲರೂ ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ (UN Annual Meeting) ಕನ್ನಡ ಕಂಪನ್ನು ಆರಿಸಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕೆಲವು ದಿನಗಳಿಂದ ನಡೆಯುತ್ತಿದೆ. ಮಾನವ ಹಕ್ಕು ಸಂರಕ್ಷಣೆ ಷರತ್ತಿನ 28ನೇ ಸಭೆಯಲ್ಲಿ ಪರಿಸರ ಸಂರಕ್ಷಣೆ ವಿಷಯವಾಗಿ ರಿಷಬ್ ಕನ್ನಡದಲ್ಲಿಯೇ ಭಾಷಣ ಮಾಡಿದ್ದು, ಎಲ್ಲರೂ ಮನಸೋತಿದ್ದಾರೆ.

ಈ ಬಾರಿ ಸರಳ ಭಾರತೀಯ ಉಡುಗೆ ಬಿಳಿಯ ಬಣ್ಣದ ಖುರ್ತಾ ಧರಿಸಿ ಅದಕ್ಕೊಪ್ಪುವ ನೀಲಿ ಬಣ್ಣದ ವೇಸ್ ಕೋಟು ಧರಿಸಿದ್ದ ರಿಷಬ್ ಶೆಟ್ಟಿ, ಭಾಷಣ ಆರಂಭಿಸಿದರು.

ಈ ಸಭೆಯಲ್ಲಿ ಭಾಷಣಕಾರರಿಗೆ ಸೀಮಿತ ಸಮಯ ನೀಡುವ ಕಾರಣ, ತುಸು ವೇಗವಾಗಿ ಮಾತನಾಡಿದ ರಿಷಬ್, ನಮಸ್ಕಾರ ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ಪರಿಸರ ಸ್ವಚ್ಛತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇಶ ಎಂದು ಮಾತನಾಡಿದ್ದಾರೆ.

ಪರಿಸರ ಸಂರಕ್ಷಣೆ ಹಾಗೂ ‘ಕಾಂತಾರ’ ಸಿನಿಮಾದ ಬಗ್ಗೆ ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಮಾಡಿರುವ ಭಾಷಣ ಇಲ್ಲಿದೆ…

”ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕಿಂತ ಹೆಚ್ಚು ಅವಧಿಯಿಂದ ತಳಮಟ್ಟ ದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಪರಿಸರ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ- ನಿರ್ದೇಶಕನಾಗಿ, ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ.

ಪರಿಸರ ಸುಸ್ಥಿರತೆಯ ಶೋಧನೆಗೆ ಜಾಗತಿಕ ಏಜೆನ್ಸಿಗಳು ಹಾಗೂ ಸರ್ಕಾರದ ಸಂಸ್ಥೆಗಳು ಮುಂಚೂಣಿಯಲ್ಲಿವೆ. ಜೊತೆಗೆ ಭಾರತದಲ್ಲಿ ನಾಗರಿಕ ಸಮಾಜ ಸಹ ಸ್ಥಳೀಯ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಇಂತಹ ಪರಿಸರ ಪ್ರಜ್ಞೆಗೆ ಸಿನಿಮಾ ಎಂಬ ಮಾಧ್ಯಮವು ಕನ್ನಡಿ ಹಿಡಿಯುತ್ತದೆ ಹಾಗೂ ವಾಸ್ತವವನ್ನು ಜಗತ್ತಿಗೆ ತೋರಿಸುವ ಪ್ರಮುಖ ಪಾತ್ರ ನಿರ್ವಹಿಸುತ್ತವೆ, ಹಲವಾರು ಭಾರತೀಯ ಸಿನಿಮಾಗಳು ಕಾಲ್ಪನಿಕ ಹಾಗೂ ವಾಸ್ತವ ಕತೆಗಳ ಮೂಲಕ ಪರಿಸರ ಸಂರಕ್ಷಣೆಯ ವಿಚಾರ ಹೇಳಿದ್ದು, ಈ ಕುರಿತು ಜಾಗೃತಿ ಮೂಡಿಸಿವೆ ಎಂಬುದು ನಮ್ಮ ಹೆಮ್ಮೆ.

ಇತ್ತೀಚಿನ ನನ್ನ ಕಾಂತಾರ ಸಿನಿಮಾದಲ್ಲಿ ಸಹ, ನಿಸರ್ಗದ ಮಡಿಲಲ್ಲಿ, ಮನುಷ್ಯನ ಜೀವನ, ಜನರ ಸ್ಥಳೀಯ ನಂಬಿಕೆ, ಆಚರಣೆ ಕುರಿತ ಪ್ರಮುಖ ಅಂಶಗಳು ಅಡಕವಾಗಿವೆ. ಪರಿಸರದ ಜತೆ ನಾವು ಹೊಂದಿರುವ ನಂಟು, ಅದು ನಮ್ಮ ಮೇಲೆ ಬೀರುವ ಪರಿಣಾಮ, ಸಹಬಾಳ್ವೆ, ಸಾಂಸ್ಕೃತಿಕ ಹಿರಿಮೆಗಳು ಹೇಗೆ ಪರಸ್ಪರ ಅವಲಂಬಿಸಿದೆ ಎಂಬುದನ್ನು ಕಾಂತಾರ ಸಿನಿಮಾ ತೋರಿಸಿದೆ. ಸ್ಥಳೀಯ ಪರಿಸರ ರಕ್ಷಣೆ, ಇದರಲ್ಲಿ ಸರ್ಕಾರದ ಪಾತ್ರ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಮುದಾಯಗಳ ಪ್ರಾಮುಖ್ಯತೆಗಳನ್ನು ಸಿನಿಮಾ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಕಾಂತಾರದಂತಹ ಸಿನಿಮಾಗಳು ವಾಸ್ತವವನ್ನು ತೆರೆದಿಡುವ ಜತೆಗೆ ಪರಿಸರದ ಸವಾಲುಗಳನ್ನು ಎದುರಿಸಲು, ಸಮಸ್ಯೆಗಳನ್ನು ಬಗೆಹರಿಸಲು ಜನರಿಗೆ ಸ್ಫೂರ್ತಿ ನೀಡುತ್ತವೆ. ಭಾವನೆಗಳನ್ನು ಜಾಗೃತಗೊಳಿಸಿ, ಪರಿಸರ ರಕ್ಷಣೆಯತ್ತ ಜನ ತೆರಳುವಂತೆ ಮಾಡುತ್ತವೆ. ಇಂತಹ ಪ್ರಯತ್ನ ಪರಿಶ್ರಮವನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎಂಬುದಾಗಿ ಇಲಿ ನೆರೆದಿರುವ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ” ಎಂದು ಮುಕ್ತವಾಗಿ ಮಾತನಾಡಿದ್ದಾರೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಿಷಬ್ ಕನ್ನಡ ಮಾತನಾಡಿರೋದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ. ಅದರಲ್ಲೂ ಪರಿಸರ ಸಂರಕ್ಷಣೆ ಬಗ್ಗೆ ರಿಷಬ್ ಹೇಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರಿಷಬ್ ಶೆಟ್ಟಿ ಕನ್ನಡ ಮಾತಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಹಿತ ಕನ್ನಡ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.

 

ಇದರ ಜೊತೆಗೆ ಮಾರ್ಚ್ 17 ರಂದು ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್‌ನಲ್ಲಿ ಕಾಂತಾರ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿದ್ದಾರೆ. ಸ್ವಿಜರ್ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ `ಕಾಂತಾರ’ ಸಿನಿಮಾದ ಪ್ರದರ್ಶನದಲ್ಲೂ ಭಾಗಿಯಾಗಲಿದ್ದಾರೆ. ಸಿನಿಮಾ ಪ್ರದರ್ಶನದ ನಂತರ ರಿಷಬ್ ಜೊತೆ ಮಾತುಕತೆಗೂ ಕೂಡ ಸಂಸ್ಥೆಯು ಆಯೋಜನೆ ಮಾಡಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!