ಕಾಂಗ್ರೆಸ್‌ ಗೆ ಗುಡ್‌ ಬೈ ಹೇಳಿದ ಕಪಿಲ್ ಸಿಬಲ್: ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಂಗ್ರೆಸ್‌ ಗೆ ಮತ್ತೊಂದು ದೊಡ್ಡ ಅಘಾತ ಎದುರಾಗಿದೆ. ಕಾಂಗ್ರೆಸ್ ಪಕ್ಷವನ್ನು ತೊರೆದಿರುವುದಾಗಿ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಘೋಷಿಸಿದ್ದಾರೆ.
ಉತ್ತರ ಪ್ರದೇಶದಿಂದ ಸಮಾಜವಾದಿ(ಎಸ್ಪಿ) ಪಕ್ಷ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ‌ಇಂದು ನಾಮಪತ್ರ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಸಿಬಲ್‌ ಈ ವಿಚಾರ ಬಹಿರಂಗಪಡಿಸಿದ್ದಾರೆ.
“ಮೇ 16 ರಂದೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆʼ ಎಂದು ಸಿಬಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಇತ್ತೀಚಿನ ಹೈ-ಪ್ರೊಫೈಲ್ ನಿರ್ಗಮನವಾಗಿದ್ದು, ಕಳೆದ ಐದು ತಿಂಗಳಲ್ಲಿ ರಾಜೀನಾಮೆ ಸಲ್ಲಿಸುತ್ತಿರುವ ಐದನೆಯ ಪ್ರಮುಖ ಕೈ ನಾಯಕ ಕಪಿಲ್ ಸಿಬಲ್.
“ನಾನು ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದೇನೆ. ಸಂಸತ್ತಿನಲ್ಲಿ ಸ್ವತಂತ್ರ ಧ್ವನಿಯಾಗಿರುವುದು ನನ್ನ ಬಯಕೆಯಾಗಿದೆʼ ಎಂದು ಸಿಬಲ್‌ ತಿಳಿಸಿದ್ದಾರೆ.
ಕಾಂಗ್ರೆಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಸಿಬಲ್, G-23 ಅಥವಾ 23 ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಗಾಂಧಿ ಕುಟುಂಬದ ಕುಟುಂಬ ರಾಜಕೀಯ ವಿರುದ್ಧ ಧ್ವನಿಯೆತ್ತಿದ್ದರು. ಅದರಲ್ಲಿಯೂ ಪ್ರಮುಖವಾಗಿ ರಾಹುಲ್‌ ಗಾಂಧಿಯವರ ನಾಯಕತ್ವದ ಕುರಿತಾಗಿ ಇತ್ತೀಚಿನ ದಿನಗಳಲ್ಲಿ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ನ ಹೀನಾಯ ಸೋಲಿನ ಅವಲೋಕನ ಹಾಗೂ ಪಕ್ಷವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ಚರ್ಚೆ ನಡೆಸಲು ಇತ್ತೀಚೆಗೆ ಕಾಂಗ್ರೆಸ್‌ ಉನ್ನತ ನಾಯಕರು ನಡೆಸಿದ್ದ ಸಭೆಯಿಂದ ಅವರನ್ನು ಹೊರಗಿಡಲಾಗಿತ್ತು. ಕಾಂಗ್ರೆಸ್‌ ಉನ್ನತಾ ಸಲಹಾ ಗುಂಪಿನಿಂದಲೂ ಹೊರಹಾಕಲಾಗಿತ್ತು. ಈ ಎಲ್ಲಾ ಸಂಗತಿಗಳು ಸಿಬಲ್‌ ಕಾಂಗ್ರೆಸ್‌ ನಿಂದ ಹೊರಗೆ ಕಾಲಿಡುತ್ತಿರುವ ಅನುಮಾನಗಳನ್ನು ಹುಟ್ಟುಹಾಕಿದ್ದವು.
2016 ರಲ್ಲಿ ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರ ಅವಧಿ ಜುಲೈನಲ್ಲಿ ಕೊನೆಗೊಳ್ಳಲಿದೆ. ಉತ್ತರಪ್ರದೇಶ ವಿಧಾನಸಭೆಯಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವುದರಿಂದ ಅಲ್ಲಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ರಾಜ್ಯಸಭೆಗೆ ಸ್ಪರ್ಥಿಸುವ ಅವಕಾಶವಿಲ್ಲ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಸಿಬಲ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯಸಭಾ ಚುನಾವಣೆಗೆ ನಾವು ಆಯ್ಕೆ ಮಾಡಿದ ಮೊದಲ ವ್ಯಕ್ತಿ ಕಪಿಲ್ ಸಿಬಲ್. ಇನ್ನೆರಡು ನಾಮಪತ್ರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ರಾಜ್ಯಸಭಾ ಚುನಾವಣೆಯು ಉತ್ತರ ಪ್ರದೇಶದ 11 ಸ್ಥಾನಗಳನ್ನು ಒಳಗೊಂಡಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!