ಹಿರಿಯ ಸಾಹಿತಿ ಡಿ. ಎಸ್. ನಾಗಭೂಷಣ ಅವರಿಗೆ ನುಡಿ ನಮನ

ಹೊಸದಿಗಂತ ವರದಿ, ಬಸವಕಲ್ಯಾಣ:
ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ, ಪತ್ರಕರ್ತ ಡಿ. ಎಸ್. ನಾಗಭೂಷಣ ಅವರಿಗೆ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ವತಿಯಿಂದ ನಗರದ ಅಲ್ಲಮಪ್ರಭು ಪದವಿ ಕಾಲೇಜಿನಲ್ಲಿ ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮಾಣಿಕ ಭುರೆ ಅವರು, ಡಿ. ಎಸ್. ನಾಗಭೂಷಣ ಅವರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ‘ಹೊಸ ಮನುಷ್ಯʼ ಸಾಹಿತ್ಯಕ ಪತ್ರಿಕೆ ಮೂಲಕ ಹೊಸ ಒಳನೋಟಗಳನ್ನು ನೀಡಿದ್ದರು ಎಂದು ಅಭಿಪ್ರಯಪಟ್ಟರು.
ಕಸಾಪ ಕಾರ್ಯದರ್ಶಿ ರಮೇಶ್ ಉಮಾಪೂರೆ ಮಾತನಾಡಿ, ಡಿ. ಎಸ್. ನಾಗಭೂಷಣ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಗಳು ಅಪಾರ. ಸಮಾಜಮುಖಿ ಚಿಂತನೆಗಳಿಂದ ಹೆಚ್ಚು ಜನಪಂಥೀಯವಾಗಿ ಗುರುತಿಸಿಕೊಂಡವರು. ಅವರ ಸಾಹಿತ್ಯ, ಸಂಪಾದನಾ ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಬಹು ಮಹತ್ವ ಪಡೆದಿವೆ ಎಂದರು.
ಕಾಲೇಜು ಪ್ರಾಚಾರ್ಯ ಚಂದ್ರಕಾಂತ ಅಕ್ಕಣ್ಣ ಮಾತನಾಡಿ, ಡಿ ಎಸ್ ನಾಗಭೂಷಣ ಅವರ ಭಾಷಾಂತರದಿಂದ ಕನ್ನಡಿಗರಿಗೆ ಗಾಂಧೀಜಿ, ಲೋಹಿಯಾ ಹೆಚ್ಚು ಪರಿಚಿತರಾದರು. ನಾಗಭೂಷಣ ಅವರ ಸಾಹಿತ್ಯ ಸಾಧನೆ ಅನನ್ಯ ಎಂದು ಹೇಳಿದರು.
ಅಕ್ಕಮಹಾದೇವಿ ಪದವಿ ಕಾಲೇಜು ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ರಾಜಕೀಯ ಮತ್ತು ಸಾಂಸ್ಕೃತಿಕ ಮೀಮಾಂಸೆಯನ್ನು ಅರಿಯಲು, ಚರಿತ್ರೆಯನ್ನು ಸರಿಯಾದ ಕ್ರಮದಲ್ಲಿ ಗ್ರಹಿಸಲು ಡಿ. ಎಸ್. ನಾಗಭೂಷಣ ಅವರು ಕನ್ನಡಕ್ಕೆ ತಂದ ಲೋಹಿಯಾ ಚಿಂತನೆ ಮತ್ತು ಗಾಂ ಕಥನಗಳು ಬಹುದೊಡ್ಡ ದಾರಿಗಳಾಗಿವೆ. ಸಮಾಜವಾದಿ ಚಿಂತಕ, ಸಂಸ್ಕೃತಿ ವಿಮರ್ಶಕ ಡಿ. ಎಸ್. ನಾಗಭೂಷಣ ಅವರ ಬರಹಗಳು ಸದ್ಯದ ಸಂದಿಗ್ಧ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದಲ್ಲಿ ಯುವ ಸಮುದಾಯಕ್ಕೆ ಹೊಸ ಬೆಳಕಾಗಿದೆ.
ಬಹುತ್ವ ಹಾಗೂ ಚಳುವಳಿಗಳ ಜೀವಂತಿಕೆಗೆ, ಸೌಹಾರ್ದ ಸಹಿಷ್ಣುತೆಯ ಬದುಕಿಗೆ ಅಗತ್ಯವಾದ ತಾತ್ವಿಕತೆ ರೂಪಿಸಿದ ಗಾಂಧೀಜಿ ಲೋಹಿಯಾ ಮತ್ತು ಅಂಬೇಡ್ಕರ್ ಈಂದಿನ ಕಾಲಘಟ್ಟಕ್ಕೂ ಹೇಗೆ ಪ್ರಸ್ತುತ ಎಂಬುದನ್ನು ನಾಗಭೂಷಣ ಅವರ ಬರಹಗಳಿಂದ ಅರಿಯಬಹುದಾಗಿದೆ ಎಂದರು. ಓಂಕಾರ ಮಠ ಮಾತನಾಡಿದರು.
ಪ್ರತಿಷ್ಠಾನದ ನಿರ್ದೇಶಕ ಡಾ. ಶಿವಾಜಿ ಮೇತ್ರೆ, ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಆನಂದ ಚಾಕೂರೆ, ವಿಜಯಕುಮಾರ್ ಪಾಟೀಲ ಮುಂತಾದವರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!