ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕಾರ, ಕಾವೇರಿ ನದಿ ನೀರು ಹಂಚಿಕೆ ಹಾಗೂ ಮಹದಾಯಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹಿರಿಯ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ನಗರದ ಸರ್ಕಿಟ್ ಸೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಅಂಗೀಕರಿಸಿದರೆ ಪಾಲಿಕೆಯನ್ನು ಸೂಪರ್ಸೀಡ್ ಮಾಡುವಂತೆ ಒತ್ತಾಯಿಸುವ ಸಚಿವರ ನಡೆ ಸರಿಯಲ್ಲ ಎಂದು ಟೀಕಿಸಿದರು.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಹಿತಾಸಕ್ತಿಗಳನ್ನು ಸಮರ್ಪಕವಾಗಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮಹದಾಯಿ, ಕಳಸಾ-ಬಂಡೂರಿ, ಕಾವೇರಿ ಹಾಗೂ ಕೃಷ್ಣಾ ನದಿ ನೀರಿನ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರವಾಗಿ ಪ್ರಬಲ ವಾದ ಮಂಡಿಸಿಲ್ಲ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಕನ್ನಡ ಉಳಿವಿಗಾಗಿ ಹಲವು ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸಿದ್ದು, ಅವರೊಂದಿಗೆ ತಾವು ಸದಾ ಇರುತ್ತೇನೆ ಎಂದ ಅವರು, ಗಡಿನಾಡಿನ ಸಮಸ್ಯೆಗಳ ಬಗ್ಗೆ ರಾಜಕಾರಣಿಗಳಿಗೆ ನಿಜವಾದ ಕಾಳಜಿ ಇಲ್ಲ. ಕನ್ನಡವನ್ನು ಗಟ್ಟಿಗೊಳಿಸಲು ಕನ್ನಡ ಸಂಘಟನೆಗಳೇ ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.
ಕನ್ನಡ ಪರ ಹೋರಾಟಕ್ಕಾಗಿ ಬೆಳಗಾವಿಯಲ್ಲಿ ಯಾವುದೇ ಸಂಸದರು ಅಥವಾ ಶಾಸಕರು ಬೀದಿಗಿಳಿದು ಹೋರಾಟ ನಡೆಸಿಲ್ಲ. ಅಲ್ಲದೆ, ರಾಜ್ಯದ ಸಚಿವರು ಹಾಗೂ ಮುಖ್ಯಮಂತ್ರಿಗಳು ಬೆಳಗಾವಿಯ ಸಮಸ್ಯೆಗಳ ಕುರಿತು ಸಮರ್ಪಕವಾಗಿ ಧ್ವನಿ ಎತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ಎಂಬ ಗೊತ್ತುವಳಿ ಪಕ್ಷಾತೀತವಾಗಿ ಅಂಗೀಕರಿಸಬೇಕು. ನಿರ್ಣಯ ಕೈಗೊಂಡರೂ ಅಥವಾ ಕೈಗೊಳ್ಳದಿದ್ದರೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಈ ವೇಳೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಮಹಾಂತೇಶ ರಣಗಟ್ಟಿಮಠ, ಮಹಾದೇವ ತಳವಾರ, ಮಹೇಶ ಶಿಗಿಹಳ್ಳಿ, ವಾಜೀದ್ ಹಿರೇಕುಡಿ, ಬಸವರಾಜ ಉಪ್ಪಾರ, ಸೋಮು ರೈನಾಪುರೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.



