ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಪ್ರಮಾಣ ‌ಏರಿಸಲು ಚಿಂತನೆ: ಜಮೀರ್ ಅಹಮದ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಂಬಿಬಿಎಸ್ ಅಧ್ಯಯನ ಮಾಡುವ ಅಲ್ಪಸಂಖ್ಯಾತ ಸಮುದಾಯದ ಮೆರಿಟ್ ವಿದ್ಯಾರ್ಥಿಗಳಿಗೆ ನೀಡಲಾಗುವ ಸಾಲ ಸೌಲಭ್ಯದ ಪ್ರಮಾಣ ಐದು ಲಕ್ಷ ರೂ.ಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಯೋಜನೆಗಳಿಗೆ ಸಚಿವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಕೆ ಎಂ ಡಿಸಿ ವತಿಯಿಂದ ಸರ್ಕಾರಿ ಕೋಟಾ ದಡಿ ಸೀಟು ಪಡೆಯುವ ಮೆರಿಟ್ ವಿದ್ಯಾರ್ಥಿಗಳಿಗೆ ಮೂರು ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಬೇಡಿಕೆ ಮೇರೆಗೆ ಅದನ್ನು ಐದು ಲಕ್ಷ ರೂ. ಗಳಿಗೆ ಏರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಬಡ ಕುಟುಂಬಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ಸಿಗಲಿದೆ ಎಂದು ಹೇಳಿದರು.

ಅದೇ ರೀತಿಯಾಗಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವಿದೇಶ ದಲ್ಲಿ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸಿದರೆ ಪ್ರಸ್ತುತ 20 ಲಕ್ಷ ರೂ. ಶಿಕ್ಷಣ ಸಾಲ ನೀಡಲಾಗುತ್ತಿದ್ದು, ಇದೀಗ ಎನ್ಎಂಡಿಸಿ ನೆರವಿನೊಂದಿಗೆ ಹತ್ತು ಲಕ್ಷ ಹೆಚ್ಚುವರಿ ಯಾಗಿ ಒಟ್ಟು 30 ಲಕ್ಷ ರೂ.ಸಾಲ ಸೌಲಭ್ಯ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ಮೂರು ವರ್ಷ ಗಳಿಂದ ನ್ಯಾಷನಲ್ ಮೈನಾರಿಟಿ ಡೆವಲಪ್ಮೆಂಟ್ ಬೋರ್ಡ್ ನ ಯೋಜನೆಗಳು ರಾಜ್ಯಕ್ಕೆ ಲಭಿಸುತ್ತಿರಲಿಲ್ಲ. ಇತ್ತೀಚಿಗೆ ಸಭೆ ನಡೆಸಲಾಗಿದ್ದು, ಇದೀಗ ವಾರ್ಷಿಕವಾಗಿ 50 ಕೋಟಿ ರೂ. ಅನುದಾನ ರಾಜ್ಯಕ್ಕೆ ಸಿಗಲಿದೆ ಎಂದು ತಿಳಿಸಿದರು.

ನಿಗಮದ ವತಿಯಿಂದ ಇಂದು ಎಂಟು ಯೋಜನೆಗೆ ಚಾಲನೆ ನೀಡಿದ್ದು ಆ ಪೈಕಿ ಅರಿವು ಸೇರಿ ನಾಲ್ಕು ಹಳೇ ಯೋಜನೆ ಮತ್ತೆ ಆರಂಭಿಸಲಾಗಿದೆ. ನಾಲ್ಕು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ. ನಿರುದ್ಯೋಗಿ ಗಳಿಗೆ ಕಾರು ಸೇರಿ ನಾಲ್ಕು ಚಕ್ರ ವಾಹನ ಖರೀದಿಗೆ 3 ಲಕ್ಷ ಸಬ್ಸಿಡಿ ನೀಡುವ ಸ್ವಾವಲಂಬಿ, ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ಶ್ರಮಶಕ್ತಿ, ವಿಧವೆ, ವಿಚ್ಚೆಧಿತ, ಅವಿವಾಹಿತ ಮಹಿಳೆಯರಿಗೆ 50 ಸಾವಿರ ಸಾಲ ನೀಡುವ ಹಾಗೂ ವೃತ್ತಿ ಪ್ರೋತ್ಸಾಹ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ, ಕೆ ಎಂ ಡಿಸಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!