Sunday, December 10, 2023

Latest Posts

ಬಸ್‌ಗಳಲ್ಲಿ ಆಡಿಯೋ ಘೋಷಣಾ ವ್ಯವಸ್ಥೆ ಅಳವಡಿಸಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೃಷ್ಟಿ ವಿಕಲಚೇತನ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ಗಳಲ್ಲಿ ಆಡಿಯೋ ಘೋಷಣಾ ವ್ಯವಸ್ಥೆಯನ್ನು ಅಳವಡಿಸುವಂತೆ ಸರ್ಕಾರವು ಬಸ್ ನಿರ್ವಾಹಕರಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠ, ಮುಂದಿನ ದಿನಗಳಲ್ಲಿ ಬಸ್‌ ಓಡಿಸಲು ರಾಜ್ಯ ಸರ್ಕಾರದಿಂದ ಹೊಸ ಅನುಮತಿಯನ್ನು ಪಡೆಯುವ ನಿರ್ವಾಹಕರಿಗೆ ಇದು ಪೂರ್ವ ಷರತ್ತಾಗಿರುತ್ತದೆ ಎಂದು ಹೇಳಿದೆ.

ಅದಾಗ್ಯೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ರಾಜ್ಯ ಸರ್ಕಾರವು ನಿಗಮದ ಬಸ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ತೆಗೆದುಕೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿದೆ.

ನಮ್ಮ ಮೆಟ್ರೋದಲ್ಲಿ ಕಂಡುಬರುವ ಆಡಿಯೋ ಅಲರ್ಟ್ ವ್ಯವಸ್ಥೆಯನ್ನು ಸಾರ್ವಜನಿಕ ಸಾರಿಗೆ ನಿಗಮದ ಬಸ್‌ಗಳಲ್ಲಿ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದೃಷ್ಟಿ ವಿಕಲಚೇತನ ವ್ಯಕ್ತಿ ಶ್ರೇಯಸ್ ಎನ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೀಠವು ವಿಚಾರಣೆ ನಡೆಸಿ ಈ ಸೂಚನೆ ನೀಡಿದೆ.

ರಾಜ್ಯದಲ್ಲಿ ದೃಷ್ಟಿಹೀನರೂ ಸೇರಿದಂತೆ ಅಂಗವಿಕಲರ ಸುಗಮ ಸಂಚಾರಕ್ಕೆ ಕೈಗೊಳ್ಳಬಹುದಾದ ದೇಶಕ್ಕೆ ಮಾದರಿಯಾಗುವಂತಹ ಸುರಕ್ಷತಾ ಕ್ರಮ ಯೋಜನೆ ಜಾರಿಗೆ ಸಲಹೆಗಳೊಂದಿಗೆ ಮಾಹಿತಿ ನೀಡಲು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!