ಹೊಸದಿಗಂತ ಡಿಜಿಟಲ್ ಡೆಸ್ಕ್
ಆಲೂಕಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾಟರ್ ಪೈನಲ್ ಪಂದ್ಯದಲ್ಲಿ ಮಧ್ಯಮ ವೇಗಿಗಳ ಮಿಂಚಿನ ದಾಳಿಯ ಬಲದಿಂದ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ ಮೇಲುಗೈ ಸಾಧಿಸಿದೆ.
ಪಂದ್ಯದ ಮೊದಲ ದಿನವಾದ ಸೋಮವಾರ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತ್ತು. ಇಂದು ಬೆಳಗ್ಗೆ ಬ್ಯಾಟಿಂಗ್ ಮುಂದುವರೆಸಿದ ತಂಡ 253 ರನ್ ಗಳಿಗೆ ಪತನಗೊಂಡಿತು. ಒಂದೆಡೆ ನಿರಂತರವಾಗಿ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಕಚ್ಚಿಕೊಂಡು ಆಡಿದ ಆಲ್ರೌಂಡರ್ ಶ್ರೇಯಸ್ ಗೋಪಾಲ್ 80 ಎಸೆತಗಳಲ್ಲಿ ಅಜೇಯ 56 ರನ್ ಸಿಡಿಸಿ ತಂಡ ಗೌರವಾನ್ವಿತ ಮೊತ್ತ ದಾಖಲಿಸಿತು.
ಗುರಿ ಬೆನ್ನಟ್ಟಿ ಬ್ಯಾಟಿಂಗ್ ಗೆ ಇಳಿದ ಉತ್ತರ ಪ್ರದೇಶ ತಂಡವು 37.3 ಓವರ್ ಗಳಲ್ಲಿ ಕೇವಲ 155 ರನ್ ಗಳಿಗೆ ಆಲೌಟ್ ಆಗಿದೆ. ಕರ್ನಾಟಕ ಪರ ರೋನಿತ್ ಮೋರೆ( 47 ಕ್ಕೆ 3 ವಿಕೆಟ್), ವೈಶಾಕ್ ವಿಜಯ್ ಕುಮಾರ್ (29 ಕ್ಕೆ2) ಹಾಗೂ ವಿದ್ವತ್ ಕಾವೇರಪ್ಪ ( 19ಕ್ಕೆ 2) ಮಾರಕ ದಾಳಿ ನಡೆಸಿ ಉತ್ತರಪ್ರದೇಶ ಬ್ಯಾಟ್ಸ್ ಮನ್ ಗಳನ್ನು ಕಂಗಡಿಸಿದರು. ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಸಹ 2 ವಿಕೆಟ್ ಕಬಳಿಸಿದರು. ಯುಪಿ ತಂಡವು ಒಂದು ಹಂತದಲ್ಲಿ 111 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥತಿಯಲ್ಲಿತ್ತು. ಈ ಹಂತದಲ್ಲಿ ಜೊತೆಗೂಡಿದ ಶಿವಂ ಮಾವಿ(32) ಹಾಗೂ ಅಂಕಿತ್ ರಜಪೂತ್(18) ಕೊನೆಯ ವಿಕೆಟ್ ಗೆ 44 ರನ್ ಸೇರಿಸಿದರು. ಈ ಮೂಲಕ ರಾಜ್ಯತಂಡವು ಮೊದಲ ಇನ್ನಿಂಗ್ಸ್ ನಲ್ಲಿ 98 ರನ್ ಗಳ ಮುನ್ನಡೆ ಗಳಿಸಿಕೊಂಡಿದೆ.