ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ನೀಲೇಶ್ವರ ಅಂಞೂಟಂಬಲ ಶ್ರೀ ವೀರರ್‌ಕಾವ್ ಕ್ಷೇತ್ರದಲ್ಲಿ ಶ್ರೀ ದೈವಗಳ ಕಳಿಯಾಟ ಮಹೋತ್ಸವ ನಡೆಯುತ್ತಿದ್ದ ಸಂದರ್ಭ ಸಂಭವಿಸಿದ ಸುಡುಮದ್ದು ದುರಂತದಲ್ಲಿ ಇದುವರೆಗೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಅದರಂತೆ ಗಂಭೀರವಾಗಿ ಸುಟ್ಟು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುರುತ್ತಿ ಓರ್ಕಳ ನಿವಾಸಿ ಶಿಬಿನ್‌ರಾಜ್ (19), ಚೆರಿಯಂಗೋಡ್ ಕಿಣಾವೂರ್ ಮಂಞಳಂಕಾಟ್ ಕೊಲ್ಲಂಬಾರದ ಬಿಜು (36), ಟೊಯ್ಯಂಗೋಡ್ ಕಿಣಾವೂರ್‌ನ ರತೀಶ್ (48), ಕರಿಂದಳಂ ಕಿಣಾವೂರ್ ನಿವಾಸಿಯಾದ ಆಟೋ ಚಾಲಕ ಸಂದೀಪ್ (38) ಎಂಬವರು ಮೃತಪಟ್ಟ ದುರ್ದೈವಿಗಳು.
ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪ್ ಶನಿವಾರ ಸಂಜೆ ಅಸುನೀಗಿದರು. ಕಲ್ಲಿಕೋಟೆಯ ಆಸ್ಪತ್ರೆಯಲ್ಲಿದ್ದ ರತೀಶ್ ಭಾನುವಾರ ಬೆಳಗ್ಗೆ ಸಾವಿಗೀಡಾದರು. ಅಲ್ಲದೆ ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜು ಮತ್ತು ಶಿಬಿನ್‌ರಾಜ್ ಭಾನುವಾರ ರಾತ್ರಿ ಕೊನೆಯುಸಿರೆಳೆದರು.
ಅ.೨೮ರಂದು ಮಧ್ಯರಾತ್ರಿ 12 ಗಂಟೆಗೆ ನೀಲೇಶ್ವರ ಅಂಞೂಟಂಬಲ ಶ್ರೀ ವೀರರ್‌ಕಾವ್ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿತು. ಶ್ರೀ ಮೂವಾಳಂಕುಳಿ ಚಾಮುಂಡಿ ದೈವದ ವೆಳ್ಳಾಟಂ ಜರಗುತ್ತಿದ್ದ ಸಂದರ್ಭ ಪಟಾಕಿ ಸಿಡಿಸುತ್ತಿದ್ದಾಗ ಅದರಿಂದ ಕಿಡಿ ಹಾರಿ ಪಟಾಕಿ ದಾಸ್ತಾನಿರಿಸಿದ್ದ ಶೆಡ್‌ನ ಮೇಲೆ ಬಿದ್ದಿದೆ. ಈ ವೇಳೆ ಪೂರ್ಣವಾಗಿ ಪಟಾಕಿ ಸೋಟಗೊಂಡು ಅವಘಡ ನಡೆದಿತ್ತು. ದುರಂತದಲ್ಲಿ 157 ಮಂದಿ ಗಾಯಗೊಂಡಿದ್ದರು. ಈ ಪೈಕಿ ಕೆಲವರು ಚಿಕಿತ್ಸೆಯಿಂದ ಮರಳಿದ್ದರೆ, ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.