ಒಂದು ಸಮುದಾಯವನ್ನು ಚಿವುಟಿ, ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತಿರಾ?: ರಾಜ್ಯ ಸರಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಕ್ಫ್ ವಿವಾದವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಸರಿ ಮಾಡದಿದ್ದರೆ ರೈತರೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಮನೆಗಳಿಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರದ ನಡುವೆ ದೊಡ್ಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು , ಎಷ್ಟು ದಿನ ಜನರಿಗೆ ಹೀಗೆ ಮೋಸ ಮಾಡುತ್ತೀರಾ? ಒಂದು ಸಮುದಾಯವನ್ನು ಚಿವುಟುತ್ತೀರಾ? ಮತ್ತೊಂದು ಸಮುದಾಯದ ತೊಟ್ಟಿಲು ತೂಗುತ್ತಿರಾ? ಜನರಲ್ಲಿ ಕ್ಷಮೆ ಕೇಳಿ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಜನರೇ ನಿಮ್ಮ ಮನೆಗಳಿಗೆ ನುಗ್ಗುವ ಕಾಲ ದೂರವಿಲ್ಲ. ಮೊನ್ನೆ ಮೊನ್ನೆ ಕಾಂಗ್ರೆಸ್ ಎಂಎಲ್‌ಸಿ ಒಬ್ಬರು ರಾಜ್ಯಪಾಲರ ಮನೆಗೆ ಬಾಂಗ್ಲಾ ದೇಶದ ಪ್ರಧಾನಿ ಮನೆಗೆ ಜನ ನುಗ್ಗಿದಂತೆ ನುಗ್ಗುತ್ತಾರೆ ಅಂದಿದ್ದರು. ಅದೇ ಪರಿಸ್ಥಿತಿ ನಿಮಗೂ ಬಂದರೂ ಅಚ್ಚರಿ ಇಲ್ಲ. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟರು.

ನಾನು ಸಿಎಂ ಆಗಿದ್ದ ಅವಧಿಯಲ್ಲಿ ನನ್ನ ಮುಂದೆ ಯಾವುದೇ ವಕ್ಫ್ ಕಡತ ಬಂದಿರಲಿಲ್ಲ. ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರ ಕಾಲದಲ್ಲೂ ವಕ್ಫ್ ತೀರ್ಮಾನ ಆಗಿದೆ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಬೇಜಬ್ದಾರಿತನದ್ದು ಎಂದು ಅವರು ಕಿಡಿಕಾರಿದರು.

ಒಂದು ವೇಳೆ ನನ್ನ ಕಾಲದಲ್ಲಿ ವಕ್ಫ್ ವಿಚಾರಕ್ಕೆ ಸಂಬಂಧಿಸಿ ಏನಾದರೂ ಆಗಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಕಂದಾಯ ಸಚಿವರಾಗಿದ್ದವರು ಕೃಷ್ಣಭೈರೇಗೌಡರು, ವಕ್ಫ್ ಮಂತ್ರಿ ಆಗಿದ್ದವರು ಈಗಿನ ವಕ್ಫ್ ಸಚಿವರೇ. ನನ್ನ ಗಮನಕ್ಕೆ ಬಾರದೆ ಅವರು ಮಾಡಿದ್ದರೆ ಅದಕ್ಕೂ ನಮಗೂ ಸಂಬಂಧ ಇಲ್ಲ. ನಾನು ಯಾವುದೇ ಕಾನೂನು ಬಾಹಿರ ಕೃತ್ಯಕ್ಕೆ ಅವಕಾಶ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿನಾಕಾರಣ ನನ್ನನ್ನು ಎಳೆಯುವುದಾದರೆ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ. ಪಲಾಯನ ಮಾಡುವುದಿಲ್ಲ. ಸಿಎಂ ಆದವರು ಸುಳ್ಳು ಹೇಳಬಾರದು. ಸತ್ಯ ಹರಿಶ್ಚಂದ್ರನಂತೆ ‘ಸತ್ಯಮೇವ ಜಯತೇ’ ಜಪ ಮಾಡುತ್ತಾರೆ. ದಿನವೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸ್ವಲ್ಪ ಜವಾಬ್ದಾರಿಯಿಂದ ಮಾತಾಡಬೇಕು. ಕಾಂಗ್ರೆಸ್ ಜನರನ್ನು ಧರ್ಮ, ಜಾತಿ ಹೆಸರಿನಲ್ಲಿ ಒಡೆದು ಅಳುತ್ತಿದೆ. ಇದು ಕಾಂಗ್ರೆಸ್ ಸರ್ವನಾಶದ ಕಾಲ. ಅದನ್ನು ಮಲ್ಲಿಕಾರ್ಜುನ ಖರ್ಗೆಯವರೇ ಹೇಳಿದ್ದಾರೆ. ಇವರ ನಡವಳಿಕೆಯಿಂದ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!