ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಯಶಸ್ಸಿಗೆ ಶ್ರಮಿಸಿ: CWC ಸಭೆಯಲ್ಲಿ ಖರ್ಗೆ ಪಾಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೈಯಕ್ತಿಕ ಹಿತಾಸಕ್ತಿ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಯಶಸ್ಸಿಗೆ ಶ್ರಮಿಸಬೇಕಿದೆ. ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ನಾವು ನಮ್ಮ ವಿರೋಧಿಗಳನ್ನು ಮಣಿಸಬಹುದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಮಾತನಾಡಿದ ಅವರು, ಶಿಸ್ತು, ಸಂಯಮ ಮತ್ತು ಒಗ್ಗಟ್ಟಿನ ಪ್ರಾಮುಖ್ಯತೆ ಕುರಿತು ಪಾಠ ಮಾಡಿದ್ದಾರೆ.

‘ಒಗ್ಗಟ್ಟು ಮತ್ತು ಶಿಸ್ತಿನಿಂದಲೇ ನಾವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ.ಹಾಗಾಗಿ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತಾಸಕ್ತಿಗೋಸ್ಕರ ಅದನ್ನು ಬಿಡಬೇಕು. ಸ್ವಯಂ ಸಂಯಮವನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ನಮ್ಮದೇ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಬೇಕಿದೆ’ ಎಂದು ಕಿವಿಮಾತು ಹೇಳಿದರು.

ಇಂದು ಕಾಂಗ್ರೆಸ್‌ ಮುಂದೆ ಅನೇಕ ಸವಾಲುಗಳಿವೆ. ಈ ಸವಾಲುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿಲ್ಲ. ಅವುಗಳು ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತೀಯ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿವೆ ಎಂದರು.

‘ಐದು ರಾಜ್ಯಗಳ ಚುನಾವಣೆ ಇನ್ನೆರಡು ಮೂರು ತಿಂಗಳಲ್ಲಿ ನಡೆಯಲಿವೆ. ಲೋಕಸಭಾ ಚುನಾವಣೆಗೆ ಆರು ತಿಂಗಳು ಬಾಕಿಯಿದೆ. ಜಮ್ಮು-ಕಾಶ್ಮೀರದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಅದಕ್ಕೂ ಸಿದ್ದರಾಗಿರಬೇಕಾಗಿದೆ’ ಎಂದರು.

ಐದು ರಾಜ್ಯಗಳಲ್ಲಿ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು, ಈ ಬಗ್ಗೆ ಸಭೆಯಲ್ಲಿದ್ದ ರಾಜ್ಯಾಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಖರ್ಗೆ ಪ್ರಶ್ನಿಸಿದ್ದಾರೆ. ‘ಮಂಡಲ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ನಿಮ್ಮ ಸಮಿತಿಗಳು ಸಿದ್ಧವಾಗಿದೆಯೇ? ನೀವು ಅವರಿಗೆ ನಿಯಮಿತ ಕಾರ್ಯಕ್ರಮಗಳನ್ನು ನೀಡುತ್ತಿದ್ದೀರಾ? ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಿರಿಯೇ?’ ಎಂದು ಕೇಳಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಹಲವು ಪಟ್ಟು ಹೆಚ್ಚಾಗಿದೆ. ಬಡವರು, ರೈತರು, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸರ್ವಾಧಿಕಾರವನ್ನು ಉರುಳಿಸಲು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಜ2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಗುರಿಯಾಗಬೇಕು. ಇದು ವಿಶ್ರಮಿಸುವ ಸಮಯವಲ್ಲ. ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!