ಜನರೊಡನೆ ನಿರಂತರ ಸಂಪರ್ಕವಿರಿಸಿಕೊಳ್ಳಿ: ಪೊಲೀಸರಿಗೆ ಎಡಿಜಿಪಿ ಅಲೋಕ್ ಕುಮಾರ್ ಸೂಚನೆ

ಹೊಸದಿಗಂತ ವರದಿ, ಕಲಬುರಗಿ
ಜನರ ಹಾಗೂ ಪೊಲೀಸರ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ನಿಗದಿತವಾಗಿ ಠಾಣೆಗಳಲ್ಲಿ ಜನ ಸಂಪರ್ಕ ಸಭೆ ಹಾಗೂ ದಿನಾಲು ಸಂಜೆ ಐದರಿಂದ ಆರು ಗಂಟೆವರೆಗೆ ವಿಸಿಟರ್ಸ್ ಹವರ್ಸ್ ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅಲೋಕ ಕುಮಾರ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ನಗರದ ಪೋಲಿಸ್ ಪರೇಡ್ ಮೈದಾನದಲ್ಲಿ ಸನ್ನತಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಗದಿತ ಜನ ಸಂಪರ್ಕ ನಡೆದರೆ ಅಲ್ಲೇ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಪರಿಹಾರ ಕಂಡುಕೊಳ್ಳಬಹುದಲ್ಲದೆ, ಜನಸ್ನೇಹಿ ವಾತಾವರಣ ನಿರ್ಮಾಣವಾಗುತ್ತದೆ. ಅದಲ್ಲದೇ ವಿಸಿಟರ್ಸ್ ಹವರ್ಸ್ ಅಳವಡಿಸಿಕೊಂಡರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು ಎಂದು ವಿವರಣೆ ನೀಡಿದರಲ್ಲದೇ ಈ ಕುರಿತು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ರೌಡಿ ಪಡೆ ನಿಗ್ರಹಕ್ಕೂ ಸೂಚನೆ ನೀಡಲಾಗಿದ್ದು, ಗೂಂಡಾ ಕಾಯ್ದೆ ಅಥವಾ ಸಾಧ್ಯವಾದರೆ ಕೋಕಾ ಕಾಯ್ದೆ ಜಾರಿ ತರುವಂತೆ ನಿರ್ದೇಶನ ನೀಡಲಾಗಿದೆ. ಪ್ರಮುಖವಾಗಿ ಈಗಾಗಲೇ ನೀಡಲಾಗಿರುವ ಆಯುಧ ಅನುಮತಿಯನ್ನು ಪರಾಮರ್ಶಿಸುವಂತೆ ಹಾಗೂ ಮುಂದೆ ನೀಡಲಾಗುವ ಆಯುಧ ಅನುಮತಿಯನ್ನು ಎಲ್ಲ ಪರಾಮರ್ಶಿಸುವಂತೆ ಸೂಚನೆ ನೀಡಲಾಗುವುದು ಎಂದರು.
ರೌಡಿ ಶೀಟರ್ ದಿಂದ ಹೆಸರು ತೆಗೆದು ಹಾಕಿರುವುದನ್ನು ಅವಲೋಕನ ನಡೆಸುವಂತೆ ಹಾಗೂ ಮತ್ತೆ ಅಕ್ರಮ ಚಟುವಟಿಕೆ ಕಂಡು ಬಂದರೆ ರೌಡಿ ಶೀಟರ್ ಓಪನ್ ಮಾಡುವಂತೆ ಸೂಚಿಸಲಾಗಿದೆ ಎಂದು ಅಲೋಕ ಕುಮಾರ ತಿಳಿಸಿದರು.
ಕಲಬುರಗಿ ನಗರ ಪೋಲಿಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಸಿಬ್ಬಂದಿ ಕೊರತೆಯಿಲ್ಲ. ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಕಾಯ೯ ನಿವ೯ಹಿಸಬೇಕು ಎಂದು ಹೇಳಿದರು.
ಮರಳುಗಾರಿಕೆ ತಡೆಗಟ್ಟಲು ಕೇವಲ ಪೋರಿಸರಿಂದ ಮಾತ್ರ ಸಾಧ್ಯವಿಲ್ಲ. ಗಣಿಗಾರಿಕೆ, ಕಂದಾಯ, ಆರ್.ಟಿ.ಓ.ಇಲಾಖೆಗಳ ಅಧಿಕಾರಿಗಳ ಸಹಕಾರ ಅಗತ್ಯವಿದ್ದು, ಎಲ್ಲವೂ ಪೋಲಿಸರಿಂದ ನಿಭಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್, ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ರವಿಕುಮಾರ, ಎಸ್ಪಿ ಇಶಾ ಪಂತ, ಬೀದರ್ ಎಸ್ಪಿ ಕಿಶೋರ ಬಾಬು, ಡಿಸಿಪಿ ಅಡ್ಡೂರು ಶ್ರೀ ನಿವಾಸ ಸೇರಿದಂತೆ ಮುಂತಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!