ಹೊಸದಿಗಂತ ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ಕೇಂದ್ರೀಯ ವಿದ್ಯಾಲಯ ಮುಂಜೂರು ಮಾಡಿರುವುದು ನನಗೆ ಸಂತಸ ತಂದಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಅತಿ ಹಿಂದುಳಿದ ಜಿಲ್ಲೆಯಾಗಿದ್ದು, ಭೌತಿಕವಾಗಿ ಅಭಿವೃದ್ದಿಗೊಳಿಸಲು ಸಾಕಷ್ಟು ದಾರಿಗಳಿವೆ. ಕೆ.ಎಂ.ಇ.ಆರ್.ಸಿ.ಯಂತಹ ಸಾಕಷ್ಟು ಅನುದಾನದ ಮೂಲಗಳಿವೆ. ಆದರೆ, ಚಿತ್ರದುರ್ಗ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಲು ಹಲವಾರು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಜೊತೆಗೆ ಗುಣಮಟ್ಟದ ಶಿಕ್ಷಣ ದೊರಕುವುದು ಅತ್ಯಂತ ಅಗತ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಈ ಜಿಲ್ಲೆಯ ಜನರಿಗೆ ಅಗತ್ಯವಾಗಿ ಬೇಕಾಗಿದ್ದ ಕೇಂದ್ರಿಯಾ ವಿದ್ಯಾಶಾಲೆಯನ್ನು ಮಂಜೂರು ಮಾಡಿಸಿದ್ದೇನೆ ಎಂದಿದ್ದಾರೆ.
ಈ ಹಿಂದಿನ ಲೋಕಸಭಾ ಸದಸ್ಯರಾಗಿದ್ದ ನಾರಾಯಣ ಸ್ವಾಮಿಯವರು ಕೇಂದ್ರೀಯ ವಿದ್ಯಾಶಾಲೆಗೆ ಸ್ಥಾಪನೆಗೆ ಪ್ರಸ್ಥಾವನೆಯನ್ನು ಸಲ್ಲಿಸಿದ್ದರು, ಆದರೆ, ಕಳೆದ ಎರಡೂವರೆ ವರ್ಷಗಳಿಂದ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ನಾನು ಲೋಕಸಭಾ ಸದಸ್ಯನಾದ ಮೇಲೆ ಕೇಂದ್ರೀಯಾ ವಿದ್ಯಾಲಯ ಸ್ಥಾಪನೆಗೆ ಇದ್ದ ಅಡೆ ತಡೆಗಳನ್ನು ಸರಿಪಡಿಸಿ ಜೂನ್ ೨೦೨೪ ರಂದು ಕೆಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೆಂದ್ರ ಪ್ರಧಾನ್‌ರವರಿಗೆ ಮರು ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಗೆ ಮನವಿ ಮಾಡಿದ್ದೆ. ಇದಲ್ಲದೇ 22.07.2024 ರಂದು ಪ್ರಥಮ ಲೋಕಸಭಾ ಅಧಿವೇಶನದಲ್ಲಿಯೇ ಚಿತ್ರದುರ್ಗ ಜಿಲ್ಲೆಗೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ಪ್ರಶ್ನೆ ಕೇಳುವ ಮೂಲಕ ಧ್ವನಿ ಎತ್ತಿದ್ದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ದೊರಕಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ಚಿತ್ರದುರ್ಗ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
೨೦೨೫-೨೬ ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಚಿತ್ರದುರ್ಗದ ಕೇಂದ್ರಿಯಾ ವಿದ್ಯಾಶಾಲೆ ಕಾರ್ಯರಾಂಭ ಮಾಡಲಿದೆ. ತಾತ್ಕಾಲಿಕವಾಗಿ ಶಾಲೆ ನಡೆಸಲು ಈಗಾಗಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ, ಲೋಕಸಭಾ ಅಧಿವೇಶನ ಮುಗಿದ ತಕ್ಷಣ ಕೆಂದ್ರೀಯಾ ವಿದ್ಯಾಶಾಲೆಯ ಬೆಂಗಳೂರಿನ ಸಹಾಯಕ ಆಯುಕ್ತರನ್ನು ಕರೆಸಿ ಚರ್ಚೆ ನಡೆಸುತ್ತೇನೆ. ಚಿತ್ರದುರ್ಗ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ಇದು ಮೊದಲ ಯಶಸ್ಸು ಎಂದು ನಾನು ಭಾವಿಸಿದ್ದೇನೆ.
ಈಗಾಗಲೇ ಅತಿ ಹೆಚ್ಚು ಪರಿಶಿಷ್ಟ ಪಂಗಡದವರು ವಾಸ ಮಾಡುತ್ತಿರುವ ಚಳ್ಳಕೆರೆ ಬ್ಲಾಕ್‌ಗೆ ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದಿಂದ ಏಕಲವ್ಯ ಮಾದರಿ ವಸತಿ ಶಾಲೆಯನ್ನು ತರಲು ಸಚಿವರಾದ ವೀರೇಂದ್ರ ಕುಮಾರ್‌ರವರಿಗೆ ಈಗಾಗಲೇ ಪ್ರಸ್ಥಾವನೆಯನ್ನು ಸಲ್ಲಿಸಿದ್ದೇನೆ, ಇದಕ್ಕೆ ಅಗತ್ಯವಾಗಿ ಬೇಕಾಗಿರುವ 15 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಚಿತ್ರದುರ್ಗದಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ತೆರೆಯಲು ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಮನವಿ ಮಾಡಿದ್ದೇನೆ.
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆಯಿಂದ ಈ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇದಕ್ಕೆ ಅಗತ್ಯವಾಗಿರುವ 2 ಎಕರೆ ಜಮೀನನ್ನು ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಚಿತ್ರದುರ್ಗ ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾ ಶಾಲೆ ತರುವ ಅವಕಾಶ ಇದೆ, ಸತತ ಮೂರು ವರ್ಷ 10 ಸಾವಿರ ವಿದ್ಯಾರ್ಥಿಗಳು ನವೋದಯ ವಿದ್ಯಾಶಾಲೆ ಪ್ರವೇಶ ಪರೀಕ್ಷೆ ಬರೆಯಲು ನೊಂದಣಿ ಮಾಡಿಸಬೇಕು, ಈ ರೀತಿ ನೊಂದಣಿ ಮಾಡಿಸಿದರೆ ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಶಾಲೆ ಮಂಜೂರಾಗಲಿದೆ ಎಂದು ತಿಳಿಸಿದ್ದಾರೆ.