ಪಿಎಫ್ಐ ಸಮ್ಮೇಳನದಲ್ಲಿ ಮಗುವಿನ ದ್ವೇಷ ಘೋಷಣೆ- ಕೇರಳ ಹೈಕೋರ್ಟ್ ಕಳವಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಲಪ್ಪುಳದ ಕರಾವಳಿ ಭಾಗದಲ್ಲಿ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ನಡೆಸಿದ ರ್‍ಯಾಲಿಯಲ್ಲಿ ವ್ಯಕ್ತಿಯ ಹೆಗಲ ಮೇಲೆ ಕುಳಿತಿದ್ದ ಬಾಲಕನೊಬ್ಬ ಹಿಂದೂ, ಕ್ರಿಶ್ಚಿಯನ್‌ ಧರ್ಮೀಯರ ವಿರುದ್ಧ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಘಟನೆ ಬಗ್ಗೆ ಕೇರಳ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಾಜಕೀಯ ಪ್ರೇರೇಪಣೆಯಿಂದ ರಕ್ಷಿಸುವ ಅಗತ್ಯವಿದೆ ಎಂದು ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೊ) ಪ್ರಕರಣದ ವಿಚಾರಣೆ ವೇಳೆ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಗೋಪಿನಾಥ್ ಪಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ರಾಜಕೀಯ ರ್ಯಾಲಿಯಲ್ಲಿ ಮಗುವೊಂದು ದ್ವೇಷವನ್ನು ಉಗುಳುವ, ಪ್ರಚೋದನಕಾರಿ ಘೋಷಣೆ ಕೂಗಿರುವ ವೀಡಿಯೊ ನನ್ನ ಗಮನಕ್ಕೆ ಬಂದಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಾಜಕೀಯ ಅಥವಾ ಧಾರ್ಮಿಕ ರ್ಯಾಲಿಗಳಲ್ಲಿ ಭಾಗಿಯಾಗುವುದರ ಜೊತೆಗೆ ಇಂತಹ ಕೋಮು ದ್ವೇಷದ ಘೋಷಣೆಗಳನ್ನು ಕೂಗಲು ಬಲವಂತವಾಗಿ ಒತ್ತಡ ಹೇರಲಾಗಿದೆಯಾ..? ಎಂದು ಪ್ರಶ್ನಿಸಿದರು.

ಇಂತಹ ಧಾರ್ಮಿಕ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ಪೀಳಿಗೆಯನ್ನು ಬೆಳೆಸುವುದೇ..? ಎಳೆ ವಯಸ್ಸಿಗೆ ಈ ಮಗುವಿನ ಮನಸಲ್ಲಿ ಇಂತಹ ವಿಷಬೀಜ ಇದೆ. ಇನ್ನು ಇವನು ಬೆಳೆದು ದೊಡ್ಡವನಾದ ಮೇಲೆ ಇನ್ನೆಂತಹ ಘಟನೆಗಳಿಗೆ ಕಾರಣವಾಗಬಹುದು ಎಂಬುದನ್ನು ಊಹಿಸಿಕೊಳ್ಳಲೂ ಅಸಾಧ್ಯ. ಇಂತಹ ಘಟನೆಗಳು ಮರುಕಳಿಸದಂತೆ ಏನಾದರೂ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ವಾಕ್ ಮತ್ತು ಧರ್ಮದ ಸ್ವಾತಂತ್ರ್ಯದ ನೆಪದಲ್ಲಿ ಚಿಕ್ಕ ಮಕ್ಕಳನ್ನು ರಾಜಕೀಯ ಹಾಗೂ ಧಾರ್ಮಿಕ ರ್ಯಾಲಿಗಳ ಭಾಗವಾಗಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಏನು ಮಾತನಾಡುತ್ತಿದ್ದೇನೆ ಎಂದು ಆ ಹುಡುಗನಿಗೇ ಗೊತ್ತಿಲ್ಲ. 18 ವರ್ಷ ವಯಸ್ಸಿನವರೆಗೆ ಮಕ್ಕಳಿಗೆ ಮತದಾನ ಮಾಡಲು ಅಥವಾ ವಾಹನ ಚಲಾಯಿಸಲು ಕಾನೂನುಬದ್ಧ ಹಕ್ಕು ಇಲ್ಲ. ಹಾಗೆಯೇ ಇಂತಹ ನಡವಳಿಕೆಯನ್ನು ತಡೆಯುವ ಯಾವುದಾದರೂ ಕಾನೂನು ಇದೆಯೇ ಎಂದರು. ಮಕ್ಕಳ ಮೆದುಳಿನ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸನ್ನಿವೇಶಗಳಿಂದ ಅವರನ್ನು ರಕ್ಷಿಸಬೇಕು, ಅಪ್ರಾಪ್ತ ಮಕ್ಕಳು ರಾಜಕೀಯ ಅಥವಾ ಧಾರ್ಮಿಕ ರ್ಯಾಲಿಗಳಲ್ಲಿ ಭಾಗವಹಿಸಲು ಅನುಮತಿ ನೀಡಬಾರದು ಎಂದು ಜಸ್ಟಿಸ್ ಗೋಪಿನಾಥ್ ತಿಳಿಸಿದರು.

ಘಟನೆ ಬಗ್ಗೆ ಹೆಚ್ಚಿನ ಓದಿಗಾಗಿ ಈ ಲಿಂಕ್‌ ಅನ್ನು ನೋಡಿ…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!