PFI ರ‍್ಯಾಲಿಯಲ್ಲಿ ಹಿಂದೂ- ಕ್ರಿಶ್ಚಿಯನ್ನರಿಗೆ ಎಚ್ಚರಿಕೆ, ಪ್ರಚೋದನಾಕಾರಿ ಘೋಷಣೆ; ಒಬ್ಬನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಲಪ್ಪುಳ ಜಿಲ್ಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿದ್ದ ರ‍್ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದ ಸಂಬಂಧ ಕೇರಳ ಪೊಲೀಸರು ಒರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕೊಟ್ಟಾಯಂನ ಎರಟ್ಟುಪೆಟ್ಟಾ ಮೂಲದವನು. ಈತ ಬಾಲಕನನ್ನು ರ್ಯಾಲಿಗೆ ಕರೆತಂದಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲವಾರು ಪಿಎಫ್‌ ಐ ಮುಖಂಡರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣದಲ್ಲಿ ಪಿಎಫ್‌ಐ ಅಲಪ್ಪುಳ ಘಟಕದ ಅಧ್ಯಕ್ಷ ನವಾಸ್ ವಂದನ್ ಮತ್ತು ಕಾರ್ಯದರ್ಶಿ ಮುಜೀಬ್ ರನ್ನು ಮೊದಲ ಮತ್ತು ಎರಡನೇ ಆರೋಪಿಗಳಾಗಿ ಹೆಸರಿಸಲಾಗಿದೆ. ಘೋಷಣೆ ಕೂಗಿದ ಅಪ್ರಾಪ್ತನನ್ನು ಹೆಗಲ ಮೇಲೆ ಹೊತ್ತುಕೊಂಡ ವ್ಯಕ್ತಿಯನ್ನೂ ಪ್ರಕರಣದಲ್ಲಿ ಮುಖ್ಯ ಆರೋಪಿಯೆಂದು ಪರಿಗಣಿಸಲಾಗಿದೆ.
ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕಾರ್ಯಕ್ರಮದ ಸಂಘಟಕರ ವಿರುದ್ಧವೂ ಸೆಕ್ಷನ್ 153 ಎ ನಡಿ ಪ್ರಕರಣ ದಾಖಲಿಸಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸಿದ ಜನರ ಗುಂಪಿನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಶನಿವಾರ ಕೇರಳದ ಅಲಪ್ಪುಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆಯೋಜಿಸಿದ್ದ ರ‍್ಯಾಲಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಕೆಟ್ಟದಾಗಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.
ಒಬ್ಬ ವ್ಯಕ್ತಿಯ ಹೆಗಲ ಮೇಲೇರಿ ಕುಳಿತು ಸಾಗುತ್ತಿದ್ದ ಹುಡುಗ, ಹಿಂದೂ- ಕ್ರಿಶ್ಚಿಯನ್ನರೇ… ನಿಮ್ಮ ಅಕ್ಕಿಯನ್ನು ಸಿದ್ಧವಾಗಿಟ್ಟುಕೊಳ್ಳಿ. ಯಮ (ಸಾವಿನ ದೇವರು) ನಿಮ್ಮ ಮನೆಗೆ ಭೇಟಿ ನೀಡುತ್ತಾನೆ. ಗೌರವಯುತವಾಗಿ ಬದುಕಿದರೆ ನಮ್ಮ ಜಾಗದಲ್ಲಿ ಬದುಕಬಹುದು. ಇಲ್ಲದಿದ್ದರೆ, ನಿಮಗೆ ಏನು ಮಾಡುತ್ತೇವೆ ಎಂಬುದು ನಮಗೆ ತಿಳಿದಿಲ್ಲ.” ಎಂದು ಘೋಷಣೆ ಕೂಗಿದ್ದ.
ವೀಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಪಿಎಫ್‌ಐ ವಕ್ತಾರ ರೌಫ್ ಪಟ್ಟಾಂಬಿ, ಸಂಘಟನೆಯ ಸಮಾವೇಶದಲ್ಲಿ ಈ ಘೋಷಣೆಗಳನ್ನು ಕೂಗಲಾಗಿಲ್ಲ, ಆದರೆ ಸಾವಿರಾರು ಜನರು ಭಾಗವಹಿಸಿದ ರ‍್ಯಾಲಿಯಲ್ಲಿ ಈ ಘೋಷಣೆ ಕೂಗಿದ್ದ ಹೌದು ಎಂದು ಹೇಳಿದ್ದಾರೆ.
ಈ ಘೋಷಣೆಗಳು ಹಿಂದೂ ಅಥವಾ ಕ್ರಿಶ್ಚಿಯನ್ನರ ವಿರುದ್ಧವಾಗಿರಲಿಲ್ಲ, ಅದನ್ನು ಹಿಂದುತ್ವ ಭಯೋತ್ಪಾದಕರು ಮತ್ತು ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಹೇಳಿದ್ದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!