September 20, 2026
Sunday, September 20, 2026
spot_img

ಕೇರಳ ನೂತನ ಸರ್ಕಾರದ ಬಂಪರ್ ಗಿಫ್ಟ್: 2 ಗ್ಯಾರಂಟಿಗಳಿಗೆ ಗ್ರೀನ್ ಸಿಗ್ನಲ್, ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಅವರು, ಸರ್ಕಾರ ರಚನೆಯಾದ ಮೊದಲ ದಿನವೇ ರಾಜ್ಯದ ಜನತೆಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಪೈಕಿ ಎರಡು ಪ್ರಮುಖ ಭರವಸೆಗಳನ್ನು ಈಡೇರಿಸುವ ಮೂಲಕ ಆಡಳಿತಕ್ಕೆ ವೇಗ ನೀಡಿದ್ದಾರೆ.

ಜೂನ್ 15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಸಂಪುಟ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಮುಂಬರುವ ಜೂನ್ 15 ರಿಂದ ಕೇರಳ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಈ ಮಹತ್ವದ ಯೋಜನೆಯ ಸಂಪೂರ್ಣ ವಿವರ ಹಾಗೂ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ವೃದ್ಧರಿಗಾಗಿ ಪ್ರತ್ಯೇಕ ಇಲಾಖೆ

ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕೇರಳ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ವೃದ್ಧರ ಹಿತರಕ್ಷಣೆ ಮತ್ತು ಅವರ ಸೌಲಭ್ಯಗಳ ಉಸ್ತುವಾರಿಗಾಗಿ ರಾಜ್ಯದಲ್ಲಿ “ವಿಶೇಷ ಇಲಾಖೆ” ಯೊಂದನ್ನು ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಿರಿಯ ನಾಗರಿಕರಿಗಾಗಿ ಇಂತಹ ಪ್ರತ್ಯೇಕ ಸಚಿವಾಲಯ ಅಥವಾ ಇಲಾಖೆಯನ್ನು ತರುತ್ತಿರುವುದು ಇಡೀ ದೇಶದಲ್ಲೇ ಮೊದಲು ಎಂದು ಸಿಎಂ ವಿ.ಡಿ. ಸತೀಶನ್ ಹೆಮ್ಮೆಯಿಂದ ಹೇಳಿದ್ದಾರೆ.

ರಾಜ್ಯದ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿಗೆ ನೂತನ ಸರ್ಕಾರ ಭರ್ಜರಿ ವೇತನ ಪರಿಷ್ಕರಣೆಯ ಉಡುಗೊರೆ ನೀಡಿದೆ:

ಆಶಾ ಕಾರ್ಯಕರ್ತೆಯರು: ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಬರೋಬ್ಬರಿ 3,000 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಅವರ ಮಾಸಿಕ ವೇತನ 9,000 ರೂ. ನಿಂದ 12,000 ರೂ. ಗೆ ಏರಿಕೆಯಾಗಲಿದೆ.

ಅಂಗನವಾಡಿ ಮತ್ತು ಬಿಸಿಯೂಟ ಸಿಬ್ಬಂದಿ: ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಅಡುಗೆ ಸಿಬ್ಬಂದಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಆಯಾಗಳ ಮಾಸಿಕ ವೇತನವನ್ನು ತಲಾ 1,000 ರೂಪಾಯಿಗಳಷ್ಟು ಹೆಚ್ಚಳ ಮಾಡಲು ಸಂಪುಟ ಸಭೆ ನಿರ್ಧರಿಸಿದೆ.

ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿಗೆ ತರುವ ಮೂಲಕ ನೂತನ ಸಿಎಂ ವಿ.ಡಿ. ಸತೀಶನ್ ಅವರು ಜನಪ್ರಿಯ ನಿರ್ಧಾರಗಳೊಂದಿಗೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !