ಸೋಮವಾರದೊಳಗೆ ರಾಜೀನಾಮೆ ನೀಡಿ: 9 ವಿವಿಗಳ ವಿಸಿಗಳಿಗೆ ರಾಜ್ಯಪಾಲರ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರದೊಳಗೆ 9 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ರಾಜೀನಾಮೆ ನೀಡುವಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರು ಹೊರಡಿಸಿರುವ ಆದೇಶವನ್ನು ಕೇರಳ ರಾಜಭವನ ಭಾನುವಾರ ಬಿಡುಗಡೆ ಮಾಡಿದ್ದು, ಕೇರಳದ 9 ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು ತಮ್ಮ ರಾಜೀನಾಮೆಯನ್ನು ಅಕ್ಟೋಬರ್ 24 ರಂದು ಬೆಳಿಗ್ಗೆ 11:30 ರೊಳಗೆ ಸಲ್ಲಿಸುವಂತೆ ಸೂಚಿಸಿ ಪತ್ರವನ್ನು ನೀಡಲಾಗಿದೆ. ಈ ಪತ್ರವನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳ ವಿಸಿಗಳು ಮತ್ತು ರಿಜಿಸ್ಟ್ರಾರ್‌ಗಳಿಗೂ ಇ-ಮೇಲ್ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಕೇರಳ ವಿಶ್ವವಿದ್ಯಾನಿಲಯ, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯ, ಕಣ್ಣೂರು ವಿಶ್ವವಿದ್ಯಾಲಯ, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ, ಕ್ಯಾಲಿಕಟ್ ವಿಶ್ವವಿದ್ಯಾಲಯ, ತಂಚಟ್ ಎಜುತಚ್ಚನ್ ಮಲಯಾಳಂ ವಿಶ್ವವಿದ್ಯಾಲಯ ಸೇರಿವೆ. ಡಾ.ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ರಾಜಶ್ರೀ ಎಂಎಸ್ ಅವರ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆ ರದ್ದುಗೊಳಿಸಿತ್ತು. ವಿಶ್ವವಿದ್ಯಾನಿಲಯ ಗ್ರಾಂಟ್‌ ಕಮಿಷನ್ ಪ್ರಕಾರ, ವಿಸಿ ಹುದ್ದೆಗೆ ಮೂವರಿಗಿಂತ ಕಡಿಮೆಯಿಲ್ಲದ ಅರ್ಹ ವ್ಯಕ್ತಿಗಳ ಸಮಿತಿಯನ್ನು ಶೋಧನಾ ಸಮಿತಿ ಶಿಫಾರಸು ಮಾಡಬೇಕಾಗಿದ್ದರೂ, ರಾಜಶ್ರೀ ಅವರ ಪ್ರಕರಣದಲ್ಲಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದೆ.

ನವೆಂಬರ್‌ನಲ್ಲಿ ರಾಜ್ಯಪಾಲರ ವಿರುದ್ಧ ಆಡಳಿತಾರೂಢ ಎಲ್‌ಡಿಎಫ್ ಸರಣಿ ಪ್ರತಿಭಟನೆಗಳನ್ನು ಘೋಷಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಕೇರಳ ಶಾಸಕ ಎಂ.ಪಿ.ಗೋವಿಂದನ್, ರಾಜ್ಯಪಾಲರು ಆರ್‌ಎಸ್ಎಸ್ ಬೆಂಬಲಿಗ ಎಂದು ಘೋಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪವು ದೌರ್ಜನ್ಯದಿಂದ ಕೂಡಿದ್ದು, ಆರ್‌ಎಸ್‌ಎಸ್ ಸದಸ್ಯರನ್ನು ಕರೆತರಲು ಸೆನೆಟ್ ಸದಸ್ಯರನ್ನು ಹಿಂತೆಗೆದುಕೊಳ್ಳಲಾಯಿತು. ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ರಾಜ್ಯಪಾಲರು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!