ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಆವರಿಸಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಆಚರಣೆಯಲ್ಲಿ ತೊಡಗಿದ್ದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಹಗಲಿರುಳೆನ್ನದೆ ಕಾವಲು ಕಾಯುವ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್‌ ಗೆ ತೆರಳಿದ್ದಾರೆ.

2014ರಿಂದಲೂ ಸೈನಿಕರೊಂದಿಗೇ ದೀಪಾವಳಿ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಇಂದು ಮುಂಜಾನೆ ಕಾರ್ಗಿಲ್‌ ಗೆ ಬಂದಿಳಿದಿದ್ದಾರೆ. ಕಾರ್ಗಿಲ್‌ ನಲ್ಲಿ ಅವರ ಆಗಮನದ ಕುರಿತು ಟ್ವೀಟ್‌ ಮಾಡಿರುವ ಪಿಎಂಓ “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಾರ್ಗಿಲ್‌ಗೆ ಬಂದಿಳಿದಿದ್ದಾರೆ, ಅಲ್ಲಿ ಅವರು ನಮ್ಮ ವೀರ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಾರೆ.” ಎಂದು ಬರೆದುಕೊಂಡಿದೆ.

ಉತ್ತರ ಪ್ರದೇಶದ ಅಯೋಧ್ಯೆಯ ದೀಪೋತ್ಸವ ಆಚರಣೆಯನ್ನು ಪೂರ್ಣಗೊಳಿಸಿದ ಮರು ದಿನವೇ ಪ್ರಧಾನಿ ಕಾರ್ಗಿಲ್‌ ಗೆ ತೆರಳಿದ್ದಾರೆ. ಅಯೋಧ್ಯೆ ಪಟ್ಟಣವು ಸರಯೂ ನದಿಯ ದಡದಲ್ಲಿ 15 ಲಕ್ಷ ದೀಪಗಳನ್ನು ಬೆಳಗಿಸುವ ಹೊಸ ವಿಶ್ವ ದಾಖಲೆಯನ್ನು ಬರೆದಿದೆ.

ಪ್ರಧಾನಿಯಾಗಿ, ಮೋದಿ ಅವರು 2014 ರಲ್ಲಿ ಸಿಯಾಚಿನ್‌ನಲ್ಲಿ ಬೆಳಕಿನ ಹಬ್ಬವನ್ನು ಮೊದಲ ಬಾರಿಗೆ ಆಚರಿಸಿದರು. 2015 ರಲ್ಲಿ ಅವರು ಪಾಕಿಸ್ತಾನದೊಂದಿಗಿನ 1965 ರ ಯುದ್ಧದಲ್ಲಿ ಭಾರತೀಯ ಸೇನೆಯ 50 ವರ್ಷಗಳ ಸಾಧನೆಗಳನ್ನು ಗುರುತಿಸಲು ಪಂಜಾಬ್‌ಗೆ ಭೇಟಿ ನೀಡಿದರು. 2016 ರಲ್ಲಿ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬವನ್ನು ಕಳೆಯಲು ಚೀನಾ ಗಡಿಯ ಬಳಿಗೆ ಹೋಗಿದ್ದರೆ 2017 ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು.

2018 ರಲ್ಲಿ, ಅವರು ಉತ್ತರಾಖಂಡದ ಹರ್ಸಿಲ್ ಮತ್ತು 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಹಬ್ಬವನ್ನು ಆಚರಿಸಿದ್ದರು. ಕಳೆದ ವರ್ಷ ಅವರು ಜಮ್ಮು ಕಾಶ್ಮೀರದ ನೌಶೆರಾದಲ್ಲಿ ಹಬ್ಬದಾಚರಣೆ ನಡೆಸಿ ಸಂಭ್ರಮಿಸಿದ್ದರು. ಪ್ರಸ್ತುತ ಕಾರ್ಗಿಲ್‌ ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!