June 6, 2026
Saturday, June 6, 2026
spot_img

ರಾಹುಲ್, ಪ್ರಿಯಾಂಕಾ ವಿರುದ್ಧ ದೇಶದ ಗಮನಸೆಳೆಯುತ್ತಿದೆ ಕೇರಳದಲ್ಲಿನ‌ ‘ವಯನಾಡ್’ ಪೋಸ್ಟರ್ ಸಮರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಗೆಲುವು ಸಾಧಿಸಿದ್ದು, ಈ ಸಂಭ್ರಮದ ನಡುವೆ ವಯನಾಡಿನಲ್ಲಿರುವ ಕಾಂಗ್ರೆಸ್ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗೋಡೆಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪೋಸ್ಟರ್‌ ಗಳು ಪತ್ತೆಯಾಗಿದೆ.

ಈ ಸಂಬಂಧ ಕಾಂಗ್ರೆಸ್ ಶಾಸಕ ಟಿ. ಸಿದ್ದೀಕ್ ದೂರು ನೀಡಿದ್ದು, ಕಲ್ಪೆಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮೇ 13 ರಂದು ಮುಂದಿನ ಕೇರಳ ಮುಖ್ಯಮಂತ್ರಿಯ ಆಯ್ಕೆಯ ಕುರಿತು ಗೊಂದಲ ಶುರುವಾಗುತ್ತಿದ್ದಂತೆ ವಯನಾಡ್ ಡಿಸಿಸಿ ಕಚೇರಿಯ ಕಾಂಪೌಂಡ್ ಗೋಡೆ ಮತ್ತು ಹತ್ತಿರದ ಜಾಗಗಳಲ್ಲಿ ಪೋಸ್ಟರ್‌ಗಳು ಪತ್ತೆಯಾಗಿದ್ದವು.

ಪೋಸ್ಟರ್ ನಲ್ಲಿ ‘ರಾಹುಲ್ ಮತ್ತು ಪ್ರಿಯಾಂಕಾ ವಯನಾಡನ್ನು ಮರೆತುಬಿಡಿ. ಮತ್ತೆ ಇಲ್ಲಿಂದ ಗೆಲ್ಲುವುದಿಲ್ಲ ಎಂದು ಬರೆಯಲಾಗಿತ್ತು. ಅದೇ ರೀತಿ ಮತ್ತೊಂದು ಪೋಸ್ಟರ್ ನಲ್ಲಿ ರಾಹುಲ್, ಕೆ.ಸಿ. ನಿಮ್ಮ ಬ್ಯಾಗ್ ತುಂಬಿರಬಹುದು, ಆದರೆ ಕೇರಳದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬರೆಯಲಾಗಿತ್ತು. ಮೂರನೇ ಪೋಸ್ಟರ್ ನಲ್ಲಿ ಕೆಸಿ ವೇಣುಗೋಪಾಲ್ ಅವರನ್ನು ಸಿಎಂ ಮಾಡುವ ನಿರ್ಧಾರ ತೆಗೆದುಕೊಂಡರೆ ವಯನಾಡ್ ಮುಂದಿನ ಅಮೇಥಿಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿತ್ತು.

ಈ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಆ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ ಮತ್ತು ಕೇರಳ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುತ್ತಿರುವುದು ಪತ್ತೆಯಾಗಿದ್ದು, ಆತನ ಹುಡುಕಾಟದಲ್ಲಿ ತೊಡಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !