ಪ್ರಧಾನಿ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದ ಖರ್ಗೆ: ಬೇಷರತ್ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

ಹೊಸದಿಗಂತ ವರದಿ, ಮಂಡ್ಯ :

ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಖಂಡಿಸಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ. ಉಮೇಶ್, ತಕ್ಷಣ ದೇಶದ ಜನರ ಬೇಷರತ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.
ಜಿಲ್ಲಾ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡಿಗರು, ಸುಸಂಸ್ಕೃತರೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಲ್ಲಿ ಇಂತಹ ಅಪ್ರಬುದ್ಧ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಹಿರಿಯರಾದ ಖರ್ಗೆ ಅವರು ಸೋಲಿನ ಹತಾಶೆಯಿಂದ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಗುಡುಗಿದರು.
ವಿಶ್ವವೇ ಒಪ್ಪಿರುವಂತಹ, ಯುವಜನರ ಕಣ್ಮಣಿಯಾಗಿರುವ ಪ್ರಧಾನಿ ನರೇಂದ್ರಮೋದಿಯವರ ಬಗ್ಗೆ ಎಲ್ಲ ವರ್ಗದ ಜನರೂ ಅಭಿನಂದಿಸಿ ಮಾತನಾಡುತ್ತಾರೆ. ಇಂತಹುದ್ದನ್ನು ಗಮನಿಸಿಯೂ ಎಐಸಿಸಿ ಅಧ್ಯಕ್ಷರು ಬಾಲಿಶವಾಗಿ ಹೇಳಿಕೆ ನೀಡುವ ಮೂಲಕ ತಮ್ಮ ತನವನ್ನು ತೋರ್ಪಸಿಕೊಂಡಿದ್ದಾರೆ ಎಂದು ಟೀಕಿಸಿದರು.
ವಿಶ್ವದ ಶ್ರೇಷ್ಠ ನಾಯಕನ ಬಗ್ಗೆ ಕಾಂಗ್ರೆಸ್ ವರಿಷ್ಠ ನಾಯಕರಾದ ಖರ್ಗೆಯವರೇ ಅಲ್ಪಮಟ್ಟದಲ್ಲಿ ಮಾತನಾಡಿದರೆ ಇನ್ನು ಕಾಂಗ್ರೆಸ್ಸಿಗರು ಯಾವ ರೀತಿ ಮಾತನಾಡುತ್ತಾರೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ತಕ್ಷಣ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನರ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ನಾವು ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚುನಾವಣಾ ಕಾಲಘಟ್ಟದಲ್ಲಿ ನಾವಿರುವುದರಿಂದ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ದೇಶ ಕಟ್ಟುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಬೇಕು. ಅದು ಬಿಟ್ಟು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಈಗಾಗಲೇ ಕೊನೆಯುಸಿಳೆಯುವ ಶಯ್ಯಾವಸ್ಥೆಯಲ್ಲಿದೆ. ಅದು ಉಸಿರುವ ನಿಲ್ಲಿಸುವ ಮುನ್ನ ಇಂತಹ ಲಘು ಹೇಳಿಕೆಗಳನ್ನು ನಿಲ್ಲಿಸಬೇಕು. ಈಗಾಗಲೇ ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಅವನತಿಯ ಹಾದಿಯಲ್ಲಿದೆ. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇದು ಸಾಭೀತಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರಮೋದಿಯವರಂತಹ ನಾಯಕರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು. ಈಗಾಗಲೇ ಜನತೆ ಅದಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಮುಂದೆಯೂ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ನಗರಸಭಾ ಸದಸ್ಯ ಎಂ.ಪಿ. ಅರುಣ್‌ಕುಮಾರ್, ಮುಖಂಡ ಎಚ್.ಆರ್. ಅರವಿಂದ್ ಗೋಷಿಯಲ್ಲಿದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!