Wednesday, October 5, 2022

Latest Posts

ಖರ್ಗೆ ಕುಟುಂಬಕ್ಕೆ ದೂಳೀಪಟ ಆಗುವ ಭೀತಿ: ಡಾ. ಉಮೇಶ್ ಜಾಧವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದ್ದು ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ ಮತ್ತು ಇತರ ಕೆಲವರಿಗೆ ಸರಿ ಎನಿಸಲಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಿಂದ ದೂಳೀಪಟ ಆಗುವ ಭೀತಿ ಅವರನ್ನು ಕಾಡುತ್ತಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ತಿಳಿಸಿದರು.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5 ಸಾವಿರ ಕೋಟಿ ಅನುದಾನ ಪ್ರಕಟಿಸಿರುವುದು ಆ ಭಾಗದ ಜನತೆಗೆ ಅತ್ಯಂತ ಸಂತಸ ತಂದಿದೆ. ನಾನು ಸಂಸದನಾಗಿ ಅತ್ಯಂತ ಸಂತೋಷ ಸೂಚಿಸುತ್ತೇನೆ. ಬೀದರ್ ಬಸವಕಲ್ಯಾಣದಿಂದ ಬಳ್ಳಾರಿ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವನ್ನೂ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ ಎಂದು ವಿವರಿಸಿದರು.
ಪ್ರಧಾನಿ ಮೋದಿಯವರಿಗಿಂತ ಹೆಚ್ಚು ಸುಳ್ಳನ್ನು ಬೊಮ್ಮಾಯಿಯವರು ಹೇಳುತ್ತಾರೆಂದು ಕೀಳು ಮಟ್ಟದ ಮಾತನ್ನು ಪ್ರಿಯಾಂಕ್ ಖರ್ಗೆ ಅವರು ಆಡುತ್ತಿದ್ದಾರೆ. ಈ ಅನುದಾನಕ್ಕಾಗಿ ಪ್ರಿಯಾಂಕ್ ಅವರು ಬೊಮ್ಮಾಯಿಯವರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಬೇಕಿತ್ತು. ಆದರೆ, ಅವರು ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ಜನರನ್ನು ಗೊಂದಲಕ್ಕೀಡು ಮಾಡಲು ಇಂಥ ಹೇಳಿಕೆ ಕೊಡುತ್ತಿದ್ದಾರೆ. 5 ದಶಕಗಳ ಕಾಲ ಆಡಳಿತ ಮಾಡಿದ ಕುಟುಂಬ ಇವರದು. ಗುರುಮಿಠಕಲ್‍ನಿಂದ ಮಲ್ಲಿಕಾರ್ಜುನ ಖರ್ಗೆಯವರು 9 ಬಾರಿ ಶಾಸಕರಾಗಿದ್ದಾರೆ. ಆದರೆ, ಅಲ್ಲಿಂದ ಗರಿಷ್ಠ ಪ್ರಮಾಣದ ಜನರು ಗುಳೆ ಹೋಗುತ್ತಿದ್ದಾರೆ. ಯಾದಗಿರಿ ರೈಲ್ವೆ ಸ್ಟೇಷನ್‍ನಲ್ಲಿ ಸಾಮಾನ್ಯ ದರ್ಜೆಯ ಟಿಕೆಟ್ ಅನ್ನು ಗುರುಮಿಠಕಲ್‍ನ ಜನರು ಪಡೆಯುತ್ತಾರೆ. ಅಲ್ಲಿನ ಜನರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವಿವರಿಸಿದರು.
ಪ್ರಿಯಾಂಕ್ ಖರ್ಗೆ ಉಸ್ತುವಾರಿ ಸಚಿವರಾದ ಬಳಿಕ ಬೆಣ್ಣೆತೊರಾದ ಯೋಜನೆ ಕೆಲಸ ಶೀಘ್ರವೇ ಪೂರ್ಣಗೊಳಿಸುವ ಭರವಸೆ ಕೊಟ್ಟಿದ್ದರು. ಈವರೆಗೆ ಅದು ಈಡೇರಿಲ್ಲ. ಗುಲ್ಬರ್ಗದ ಜನರ ತಲಾ ಆದಾಯ ಅತ್ಯಂತ ಕಡಿಮೆ ಇದೆ. ಇದು ನಾಚಿಕೆ ತರುವ ವಿಚಾರ ಎಂದರು.
ಮಲ್ಲಿಕಾರ್ಜುನ ಖರ್ಗೆಯವರು ಹಲವಾರು ವರ್ಷ ಸಚಿವರಾಗಿದ್ದು, ಪ್ರಧಾನಿ ಮತ್ತು ಮುಖ್ಯಮಂತ್ರಿಯವರ ನೆರಳಿನಂತೆ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದರು. ಆದರೂ ಕೂಡ ನಮ್ಮ ಪ್ರದೇಶದ ಪರಿಸ್ಥಿತಿ ಹೀಗಿದೆ. ಪ್ರಿಯಾಂಕ್ ಅವರು ಬೊಮ್ಮಾಯಿಯವರ ಬಗ್ಗೆ ಮಾತನಾಡುತ್ತಾರೆ. ಬೊಮ್ಮಾಯಿಯವರು ಕೋವಿಡ್ ಸಂದರ್ಭದಲ್ಲಿ ತಮ್ಮ ಮನೆಯನ್ನೇ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಇದು ಇವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಕೋವಿಡ್‍ನಲ್ಲಿ ಸತ್ತ ಹಾಗೂ ಸಂಸ್ಕಾರ ಇಲ್ಲದೆ ಬಾಕಿ ಇದ್ದ ನೂರಾರು ಜನರ ಮೃತದೇಹವನ್ನು ಅವರವರ ಸಮಾಜದ ಕ್ರಮದಲ್ಲಿ ಅಂತ್ಯಸಂಸ್ಕಾರ ಮಾಡಲು ಕಂದಾಯ ಸಚಿವ ಅಶೋಕ್ ಅವರು ಕ್ರಮ ಕೈಗೊಂಡಿದ್ದರು. ಉಮೇಶ್ ಜಾಧವ್ 3 ವರ್ಷಗಳಲ್ಲಿ ಏನು ಕೊಡುಗೆ ನೀಡಿದ್ದಾರೆಂದು ಪ್ರಿಯಾಂಕ್ ಕೇಳುತ್ತಾರೆ. ಮನ್ ಕಿ ಬಾತ್ ಕನ್ನಡದಲ್ಲಿ ಅನುವಾದ, ಅಪಘಾತದ ವೇಳೆ ನೆರವಾದ ಬಗ್ಗೆ ಪ್ರಚಾರ ಪಡೆದುಕೊಳ್ಳುವುದು ನನ್ನ ಸಾಧನೆ ಎಂದು ಅವರು ಟೀಕಿಸುತ್ತಾರೆ. ಆದರೆ, ನಾನು ವೈದ್ಯನಾಗಿ ಹಲವು ದಶಕಗಳಿಂದ ಸಾವಿರಾರು ಜನರಿಗೆ ನೆರವಾದುದರ ಪ್ರಚಾರ ಪಡೆದುಕೊಂಡಿಲ್ಲ. ಇದು ಉಮೇಶ್ ಜಾಧವ್ ಬಗೆಗಿನ ಅವರ ಅಸಹನೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಸನ್ನತಿಯಲ್ಲಿ ಅಶೋಕನ ಶಿಲ್ಪ ಕಲಾಕೃತಿ, ಶಾಸನಗಳಿದ್ದು, ಆ ಪ್ರದೇಶದ ಅಭಿವೃದ್ಧಿಗೆ ಯತ್ನ ಮಾಡಿದ್ದೇನೆ. ಅದರ ಕುರಿತು ಅನವಶ್ಯಕ ಟೀಕೆ ಮಾಡುತ್ತಿದ್ದಾರೆ. ಅನುದಾನ ಬಂದ ಬಗ್ಗೆ ತಿಳಿಸಿದ ನಂತರ ಅವರು ಆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ವಿವರ ನೀಡಿದರು. ಬೊಮ್ಮಾಯಿಯವರ ಸರಕಾರ ಅನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ನರೇಂದ್ರ ಮೋದಿಜಿ ಅವರು 5 ಟ್ರಿಲಿಯನ್ ಡಾಲರ್ ಎಕಾನಮಿ ಬಗ್ಗೆ ಚಿಂತಿಸಿ ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಒಯ್ಯುತ್ತಿದ್ದಾರೆ. ಅದನ್ನು ಸಹಿಸಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅªರು ದೆಹಲಿಯಿಂದ ಬಿಡುಗಡೆಯಾದ 100 ರೂಪಾಯಿಯಲ್ಲಿ ಕೇವಲ 15 ರೂಪಾಯಿ ಜನರಿಗೆ ತಲುಪುತ್ತದೆ ಎಂದು ಹೇಳಿದ್ದರು. ಆದರೆ, ನರೇಂದ್ರ ಮೋದಿಜಿ ಅವರ ಸರಕಾರ ಬಿಡುಗಡೆಗೊಳಿಸಿದ ಅನುದಾನ ಶೇ 100ರಷ್ಟು ಜನರನ್ನು ತಲುಪುತ್ತಿದೆ. ಇದು ಅವರ ಅಸಹನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಹೊಲದಲ್ಲಿ ಬಂಗಾರ ಬೆಳೆಯುತ್ತೀರಾ? ವಿವರ ಕೊಡಲು ಆಗ್ರಹ
ಬೆಂಗಳೂರಿನ ಸದಾಶಿವನಗರದಲ್ಲಿ ಎರಡು ದೊಡ್ಡ ಬಂಗಲೆ ಇದ್ದು, ಅವರು ಭ್ರಷ್ಟಾಚಾರದ ಮಾತನಾಡುತ್ತಾರೆ. 50 ವರ್ಷದ ಹಿಂದೆ ಅವರು ಏನಾಗಿದ್ದರು, ಈಗ ಏನಾಗಿದ್ದಾರೆ, ಆಸ್ತಿಪಾಸ್ತಿ ಎಷ್ಟಾಗಿದೆ ಎಂದು ವಿವರ ಕೊಡಬೇಕು. ಅವರ ಹೊಲದಲ್ಲಿ ಬಂಗಾರ ಬೆಳೆಯುತ್ತಾರೆಯೇ? ಆ ಫಾರ್ಮುಲಾ ತಿಳಿಸದರೆ ನಾವೂ ಬೆಳೆಯುತ್ತೇವೆ ಎಂದು ತಿಳಿಸಿದರು.
ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾನೂನುಗಳನ್ನು ರಾಜ್ಯ ಬಿಜೆಪಿ ಸರಕಾರ ಅನುಷ್ಠಾನಕ್ಕೆ ತಂದಿದೆ. ನಮ್ಮ ಸರಕಾರವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಆಧಾರದಲ್ಲಿ ನಡೆಯುತ್ತಿದೆ. ಮತ್ತೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರ ಪಡೆಯುವುದು ಕೇವಲ ಭ್ರಮೆ ಮಾತ್ರ. ದೊಡ್ಡ ದೊಡ್ಡ ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾರನ್ನು ಓಲೈಸುವುದೇ ಇವರ ರಾಜಕಾರಣ ಎಂದು ತಿಳಿಸಿದರು.

ಗುಲ್ಬರ್ಗದಲ್ಲಿ ಕಾಂಗ್ರೆಸ್ ಎಂದರೆ ಖರ್ಗೆ ಪ್ರೈವೇಟ್ ಲಿಮಿಟೆಡ್ ಆಗಿದೆ. ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಅವರೇ ಸಾಕು. ಆ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ. ಪ್ರಿಯಾಂಕ್ ಅವರು ಚಿಲ್ಲರೆ ಮಾತನ್ನು ಬಿಟ್ಟು ಒಳ್ಳೆಯ ರಾಜಕೀಯ ಮಾಡಬೇಕು ಎಂದು ಆಗ್ರಹಿಸಿದರು. ಮಂಚ ಏರಿದರೆ ನೌಕರಿ ಬಗ್ಗೆ ಪ್ರಿಯಾಂಕ್ ಮಾತನಾಡಿ ನಮ್ಮ ಅಕ್ಕ ತಂಗಿಯರು, ತಾಯಂದಿರಿಗೆ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇನ್ನೊಂದೆಡೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ದಲಿತ ಮಹಿಳೆಯರನ್ನು ರಾಷ್ಟ್ರಪತಿ ಮಾಡಿ ಗೌರವಿಸಿದ್ದಾರೆ ಎಂದು ವಿವರಿಸಿದರು.
ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಕೊನೆ ಕ್ಷಣದಲ್ಲಿ ರೈಲ್ವೆ ವಿಭಾಗವನ್ನು ಯಾಕೆ ಪ್ರಕಟಿಸಿದರು? ಬಳಿಕ ಅವರು ಆ ಬಗ್ಗೆ ಸಂಸದರಾಗಿದ್ದರೂ ಪ್ರಯತ್ನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು. ತಮ್ಮ ನೂರೆಂಟು ತಪ್ಪುಗಳನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸಿಸಿಐ, ಎಂಎಸ್‍ಕೆ ಮಿಲ್ ಬಂದ್ ಮಾಡಿದರು. ಇಂಥ ಅನೇಕ ಉದಾಹರಣೆಗಳಿವೆ. ಯಡಿಯೂರಪ್ಪ ಅವರು ವಿಶೇಷ ಅನುದಾನ ನೀಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಗುಲ್ಬರ್ಗದ ಸಣ್ಣ ಆಸ್ಪತ್ರೆಗಳಲ್ಲೂ ಈಗ ಶೇ 100ರಷ್ಟು ವೈದ್ಯರಿದ್ದಾರೆ. ತಾಲ್ಲೂಕು ಆಸ್ಪತ್ರೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಇವರ ಅವಧಿಯಲ್ಲಿ ನಡೆದ ಏರೋಡ್ರೋಮ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿವೆ. ನಮ್ಮ ಅವಧಿಯಲ್ಲಿ ಉತ್ತಮ ಕಾಮಗಾರಿ ನಡೆಯಿತು ಎಂದು ವಿವರಿಸಿದರು.
ಕೋವಿಡ್ ಅವಧಿಯಲ್ಲಿ ಅವಶ್ಯ ಔಷಧಿ ಕೂಡಲೇ ಪಡೆದುದನ್ನು ವಿವರಿಸಿದರು. ಅದೂ ಅವರಿಗೆ ಸಹನೀಯ ಅನಿಸಲಿಲ್ಲ. ಪ್ರಿಯಾಂಕ್ ಅವರು ನಾಲಿಗೆ ಮೇಲೆ ಹತೋಟಿ ಇಟ್ಟುಕೊಳ್ಳಬೇಕು; ವಸ್ತುಸ್ಥಿತಿ ಗಮನಿಸಿ ಮಾತನಾಡಬೇಕು ಎಂದು ಆಗ್ರಹಿಸಿದರು. ಪ್ರಿಯಾಂಕ್‍ಗೆ ತಮ್ಮ ರಾಜಕೀಯ ಭವಿಷ್ಯದ ಕುರಿತು ಆತಂಕ ಉಂಟಾಗಿದೆ ಎಂದರು. ಬಿಜೆಪಿ ಆಡಳಿತ ಅವಧಿಯಲ್ಲಿ ಈ ಭಾಗಕ್ಕೆ ಅನುದಾನ ಹಂಚಿಕೆ ಮತ್ತು ಬಿಡುಗಡೆ ಪ್ರಮಾಣ ಹೆಚ್ಚುತ್ತಾ ಸಾಗಿದ್ದನ್ನು ಅವರು ತಿಳಿಸಿದರು.
ಕೋಲಿ ಸಮಾಜ ತುಳಿದು ಬೆಳೆದರು
ಕೋಲಿ ಸಮಾಜದ ಮತದಿಂದ ಸತತ ಗೆದ್ದು ಬಂದ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜವನ್ನು ಎಸ್ಟಿ ಎಂದು ಪ್ರಕಟಿಸಿಲ್ಲವೇಕೆ? ಕೋಲಿ ಸಮಾಜವನ್ನು ತುಳಿದು ಅವರು ಬೆಳೆದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಅವರು ಆಕ್ಷೇಪಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಕೇವಲ 5 ನಿಮಿಷದಲ್ಲಿ ಈ ಬೇಡಿಕೆ ಈಡೇರಿಸಬಹುದಿತ್ತು. ಇವರಿಗೆ ನಾಚಿಕೆ ಆಗಬೇಕು ಎಂದರು. ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಖರ್ಗೆ ಅವರು ತಮ್ಮ ಮಗನನ್ನು ಸಚಿವರನ್ನಾಗಿ ಮಾಡಿದರು ಎಂದು ವಿವರಿಸಿದರು. ಕೋಲಿ ಸಮಾಜಕ್ಕೆ ಎಸ್ಟಿ ಸ್ಥಾನಮಾನ ಕೊಡಲು ಬಿಜೆಪಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಇದನ್ನು ಮಾಡಲು ಬದ್ಧನಿದ್ದೇನೆ ಎಂದು ಪ್ರಕಟಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ ಉಪಸ್ಥಿತರಿದ್ದು, ಕಲ್ಯಾಣ ಕರ್ನಾಟಕ ಉತ್ಸವವನ್ನು ಕಾಂಗ್ರೆಸ್ ಪಕ್ಷದವರು ಯಾಕೆ ಆಚರಿಸುತ್ತಿಲ್ಲ? ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯವಾದುದು ನಿಮಗೆ ಸಂತಸ ತಂದಿಲ್ಲವೇ ಎಂದು ಕೇಳಿದರು. ಒಂದು ಸಮುದಾಯದ ಸಲುವಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
5 ಸಾವಿರ ಶಿಕ್ಷಕರ ನೇಮಕ, ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆ ಸೇರಿ ಅನೇಕ ಅಭಿವೃದ್ಧಿ ಯೋಜನೆ ಜಾರಿಗೊಳಿಸುವ ಸರಕಾರದ ನಿರ್ಧಾರಕ್ಕೆ ಅವರು ಧನ್ಯವಾದ ಸಮರ್ಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!