ನೆಟ್ಟಾರು ಪ್ರವೀಣ್ ಹತ್ಯೆ: ಕೊಡಗಿನ ವಿವಿಧೆಡೆ ಪ್ರತಿಭಟನೆ, ಸರ್ಕಾರದ ವಿರುದ್ಧ ಆಕ್ರೋಶ

ಹೊಸದಿಗಂತ ವರದಿ, ಮಡಿಕೇರಿ:
ನೆಟ್ಟಾರು ಪ್ರವೀಣ್ ಅವರ ಹತ್ಯೆಯನ್ಮು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಜಿಲ್ಲೆಯ ವಿವಿಧೆಡೆ ಗುರುವಾರ ಪ್ರತಿಭಟನೆಗಳು ನಡೆದವು. ಪ್ರತಿಭಟನೆಯ ಸಂದರ್ಭ ರಾಜ್ಯ ಸರಕಾರ, ಬಿಜೆಪಿ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ಹೊರ ಬಿದ್ದಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ, ದುರ್ಗಾವಾಹಿನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಭರಿತ ಘೋಷಣೆ ಕೂಗಿದ ಪ್ರತಿಭಟನಾಕಾರರು, ಪ್ರವೀಣ್ ನೆಟ್ಟಾರು ಅವರ ಅಂತಿಮ ದರ್ಶನದ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯದ ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳ ವಿರುದ್ಧವೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ‌ ಸಂದರ್ಭ ಮಾತನಾಡಿದ ಭಜರಂಗದಳದ ಮುಖಂಡ ವಿನಯ್ ಅವರು, ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಪಿ‌.ಎಫ್.ಐ ಸಂಘಟನೆಯ ಕೈವಾಡವಿರುವುದಾಗಿ ಆರೋಪಿಸಿದರಲ್ಲದೆ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ‌ ಸರಕಾರವಿರುವಾಗಲೇ ಹಿಂದೂ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿರುವುದು ಖಂಡನೀಯ ಎಂದರು.
ರಾಜ್ಯ ಸರ್ಕಾರ ಹಿಂದುಗಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ ಅವರು, ಪ್ರವೀಣ್ ಹತ್ಯೆಯೊಂದಿಗೆ ಹಿಂದೂ ಕಾರ್ಯಕರ್ತರ ಹತ್ಯೆ ಕೊನೆಯಾಗಬೇಕು. ಮತ್ತೊಬ್ಬ ಹಿಂದೂ ಕಾರ್ಯಕರ್ತನ. ಹತ್ಯೆ ನಡೆದರೆ ಕಾರ್ಯಕರ್ತರ ರಕ್ಷಣೆಗೆ ಕಾರ್ಯಕರ್ತರೇ ಮುಂದಾಗಬೇಕಾಗುತ್ತದೆ. ಮಹಿಳೆಯರೂ ಖಡ್ಗ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಗುಡುಗಿದರು.
ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಸತ್ಯ ಕರ್ಕೇರ ಬಿಜೆಪಿ ಹಾಗೂ ಪೊಲೀಸ್ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ವಿಧಾನ ಪರಿಷತ್ ಮಾಜಿ‌ ಸದಸ್ಯ ಎಂ.ಪಿ.ಸುನಿಲ್ ಸೇರಿದಂತೆ ವಿ.ಹೆಚ್.ಪಿ, ಭಜರಂಗದಳ ಹಾಗೂ ದುರ್ಗಾವಾಹಿನಿ‌, ಮಾತೃಮಂಡಳಿ ಪ್ರಮುಖರು ಹಾಗೂ ಭಾಜಪ ಮುಖಂಡರು ಪಾಲ್ಗೊಂಡಿದ್ದರು.
ವೀರಾಜಪೇಟೆ ವರದಿ: ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳದ ವತಿಯಿಂದ ವಿರಾಜಪೇಟೆಯಲ್ಲೂ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಗಡಿಯಾರ ಕಂಬದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಕೊಲೆಗಡುಕರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷರಾದ ಬಿ. ಎಂ. ಕುಮಾರ್, ಭಜರಂಗದಳದ ವಿವೇಕ್ ರೈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದಾಎ ಸಂದರ್ಭ ಭಾ.ಜ.ಪ ನಗರ ಅಧ್ಯಕ್ಷ ಟಿ.ಪಿ.ಕೃಷ್ಣ, ಕಾರ್ಯದರ್ಶಿ ಪ್ರದೀಪ್ ರೈ ಮತ್ತು ಸಮಿತಿಯ ಸದಸ್ಯರು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆಯನ್ನು ಘೋಷಿಸಿದರು.
ಪೊನ್ನಂಪೇಟೆ: ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಶ್ವಹಿಂದೂ ಪರಿಷದ್ ವತಿಯಿಂದ ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಸಿತು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಆರ್.ಎಸ್. ಎಸ್. ಪ್ರಮುಖರಾದ ಚೆಕ್ಕೇರ ಮನು ಅವರು ಘಟನೆಯನ್ನು ಖಂಡಿಸಿ ಮಾತನಾಡಿದರಲ್ಲದೆ, ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ವಿಶ್ವ ಹಿಂದೂ‌ ಪರಿಷದ್ ತಾಲೂಕು ಅಧ್ಯಕ್ಷ ಪಂದಿಯಂಡ ಹರೀಶ್, ಕಾರ್ಯದರ್ಶಿ ಸುರೇಶ್ ಮತ್ತು ಭಜರಂಗದಳದ ಸುಬ್ರಮಣಿ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಗೋಣಿಕೊಪ್ಪಲು ವೃತ್ತ ನಿರೀಕ್ಷರಿಗೆ ಈ ಸಂದರ್ಭ ಮನವಿ ಪತ್ರ ಸಲ್ಲಿಸಲಾಯಿತು‌.
ಕುಶಾಲನಗರ: ಕುಶಾಲನಗರದ ಗಣಪತಿ ದೇವಾಲಯದ ಮುಂಭಾಗದ ಕಾರ್ಯಪ್ಪ ವೃತ್ತದ ಬಳಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರವೀಣ್ ಅವರ ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಯಾರೊಬ್ಬರೂ ಮುಂದಾಗದಂತಹ ಸಂದೇಶ ರವಾನೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!