ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕೊರಿಯಾ ಮತ್ತೆ ಸುದ್ದಿಗೆ ಬಂದಿದ್ದು, ಶೀಘ್ರದಲ್ಲಿಯೇ ಉಡಾಯಿಸಲಾಗುತ್ತದೆ ಎಂದು ಹೇಳಲಾಗಿರುವ ಖಂಡಾಂತರ ಕ್ಷಿಪಣಿ ಬಳಿಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ನ ಪುತ್ರಿ ಕಿಮ್ ಜು ಉನ್ ಪರಿಶೀಲನೆ ನಡೆಸುತ್ತಿರುವ ಚಿತ್ರ, ವಿಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂದಹಾಗೆ ಸರ್ಕಾರಿ ಸುದ್ದಿ ಸಂಸ್ಥೆ ‘ಕೆಸಿಎನ್‌ಎ’ ಈ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆಕೆ ತನ್ನ ತಂದೆಯ ಜತೆಗೆ ‘ಹ್ವಸಾಂಗ್-12’ ಎಂಬ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಸಿದ್ಧತೆಯನ್ನು ಪರಿಶೀಲಿಸುವ ದೃಶ್ಯಾವಳಿಗಳಿವೆ. ಪ್ರತೀ ಬೆಳವಣಿಗೆಗಳಲ್ಲಿಯೂ ನಿಗೂಢತೆಯನ್ನೇ ಕಾಯ್ದುಕೊಳ್ಳುವ ಉತ್ತರಕೊರಿಯಾದಲ್ಲಿ ಈ ಬೆಳವಣಿಗೆಗಳು ಆಡಳಿತದ ಬದಲಾವಣೆಯ ದಿಕ್ಸೂಚಿಯೇ ಎಂಬ ಸಂಶಯ ಮೂಡಿಸಿದೆ.
ಇತ್ತೀಚೆಗಷ್ಟೇ ಕಿಮ್ ಜಾಂಗ್ ಉನ್‌ನ ಆರೋಗ್ಯ ವಿಷಮಿಸುತ್ತಿದೆ ಎಂಬ ಬಗ್ಗೆ ವ್ಯಾಪಕ ವರದಿಗಳು ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದ್ದವು. ಇದರ ಬೆನ್ನಿಗೇ ಈ ದೃಶ್ಯಾವಳಿಗಳು ಉತ್ತರ ಕೊರಿಯಾದಿಂದ ಹೊರಬಿದ್ದಿವೆ