ಅನಾವರಣಗೊಳ್ಳಲಿದೆ ಕಿತ್ತೂರು ವೈಭವ, ಡಿ. 24-25ರಂದು ಮೆಗಾ ಶೋ

  • ಮಹಾಂತೇಶ ಕಣವಿ

ಹೊಸದಿಗಂತ ವರದಿ ಧಾರವಾಡ:

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಯ ಕಿಡಿ ಹೊತ್ತಿಸಿದ ವೀರ ಮಹಿಳೆ, ’ಕಿತ್ತೂರು ಚನ್ನಮ್ಮ’ ಮೆಗಾ ನಾಟಕ ಪ್ರದರ್ಶನಕ್ಕೆ ಸ್ಥಳೀಯ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆ ಸಮರೋಪಾದಿಯಲ್ಲಿ ನಡೆದಿವೆ.
ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧಾರಿತ ಜಾಣತಾ-ರಾಜಾ ನಾಟಕ ಮಾದರಿಯಲ್ಲೇ ಕಿತ್ತೂರು ಚನ್ನಮ್ಮನ ಜೀವನ ಆಧಾರಿತ ನಾಟಕ ರಂಗದ ತೆರೆಯ ಮೇಲೆ ತರಲು ಧಾರವಾಡ ರಂಗಾಯಣ ಸಿದ್ಧವಾಗಿದೆ.

ಕರ್ನಾಟಕ ಇತಿಹಾಸ, ಅದರಲ್ಲೂ ಚನ್ನಮ್ಮನ ಜೀವನ ಚರಿತ್ರೆಗೆ ಚ್ಯುತಿ ಬರದಂತೆ, ವಿವಿಧ ಸಂಶೋಧನಕರು, ಅಧ್ಯಯನ, ವಿವಿಧ ಚಲನಚಿತ್ರಗಳು, ಹತ್ತಾರು ನಾಟಕ, ಇಂಗ್ಲೆಂಡ್ ಗೇಜಿಟಿಯರ್ ಆಧರಿಸಿ ನಾಟಕ ತಯಾರಿಸಿದೆ.
ಈ ನಾಟಕ ಚನ್ನಮ್ಮನ ಸಾಹಸ, ಕಿತ್ತೂರು ವೈಭವ ಹಾಗೂ ಜಗವೀರ, ಬಿಚ್ಚುಕತ್ತಿ ಚೆನ್ನಬಸು, ಅಮಟೂರು ಬಾಳಪ್ಪ, ಅವರಾದಿ ವೀರಪ್ಪ, ಬಸಲಿಂಗಪ್ಪ ನಾಯಕ, ಒಡ್ಡರ ಯಲ್ಲಣ್ಣ, ಸಂಗೊಳ್ಳಿ ರಾಯಣ್ಣನ ಮೇಲೆ ಬೆಳಕು ಚೆಲ್ಲುತ್ತದೆ.

ರಮೇಶ ಪರವಿನಾಯ್ಕರ ಸೇರಿ ನುರಿತ ನಿರ್ದೇಶಕ ಮಾರ್ಗದರ್ಶನದಲ್ಲಿ ನಿರಂತರ ತಾಲೀಮು ನಡೆದಿದೆ. 150ಕ್ಕೂ ಹೆಚ್ಚು ಕಲಾವಿದರು ಈ ಪಾತ್ರಗಳಿಗೆ ಜೀವತುಂಬಿ ಕಲಾವೈಭವ ತೆರೆದಿಡಲು ಸಿದ್ಧತೆ ನಡೆದಿರುವುದು ವೈಶಿಷ್ಟ್ಯ. ನಾಲ್ಕೈದು ತಿಂಗಳಿಂದ ಊಟ, ವಸತಿ, ಗೌರವ ಧನ ಜತೆ ನೂರಾರು ಕಲಾವಿದರು, ಪ್ರಸಾದನ ಕಲಾವಿದರು, ಹಿನ್ನೆಲೆ ಧ್ವನಿ, ಸಂಗೀತಗಾರರು, ಸೆಟ್ ನಿರ್ಮಾಣಕಾರರನ್ನು ಒಗ್ಗೂಡಿಸಿ, ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.
150*120 ಅಡಿ ಉದ್ದಗಲ, 25 ಅಡಿ ಎತ್ತರ ಕೋಟೆ ಸೆಟ್ ನಿರ್ಮಿಸಿದೆ. 250 ಸ್ಪಾಟ್ಲೈಟ್, ಪ್ರೇಕ್ಷಕರನ್ನು ತಲುಪಲು 10 ಸಾವಿರ ಧ್ವನಿವರ್ಧಕ ವ್ಯವಸ್ಥೆ ಜೊತೆಗೆ ಜೀವಂತ ಆನೆ-ಕುದುರೆ, ಕಿತ್ತೂರು ವೈಭವ ಗೋಚರಿಸಲಿವೆ.

ನಾಟಕದ ತಾಲೀಮು ಅಂತಿಮ ಸ್ಪರ್ಶ ಕಂಡಿದೆ. ಧಾರವಾಡ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ.24, 25ರಂದು 2 ದಿನ ಕಿತ್ತೂರು ಚನ್ನಮ್ಮ ನಾಟಕದ ಮೆಗಾ ಪ್ರದರ್ಶನ ನಡೆಯಲಿದೆ. ಆಸಕ್ತರು ವೀಕ್ಷಿಸಬಹುದು.

ಶ್ರಮ ಅನನ್ಯ
ಸಂಶೋಧಕ ಡಾ.ವೀರಣ್ಣ ರಾಜೂರ ಮಾರ್ಗದರ್ಶನ, ರಮೇಶ ಪರವಿನಾಯ್ಕರ ನಿರ್ದೇಶನದಲ್ಲಿ ತಯಾರಾದ ನಾಟಕಕ್ಕೆ ಡಾ.ಬಾಳ್ಳಣ್ಣ ಶೀಗಿಹಳ್ಳಿ, ಕೆ.ಎಚ್.ನಾಯಕ, ರಂಗಕರ್ಮಿಗಳಾದ ವಿಠ್ಠಲ ಕೊಪ್ಪದ, ಎಂ.ಎಸ್.ಮಾಳವಾಡ, ಶಶೀಧರ ನರೇಂದ್ರ ಶ್ರಮ ಅನನ್ಯವಾಗಿದೆ.

ಕಲೆಗಳ ಅನಾವರಣ
ಕಿತ್ತೂರು ಚನ್ನಮ್ಮ ನಾಟಕದಲ್ಲಿ ಹೋರಾಟದ ಜೊತೆ ಕಿತ್ತೂರು ವೈಭವ, ಕಲೆಗಳು ಅನಾವಣಗೊಳ್ಳಲಿವೆ. ಚೌಡಕಿ ಪದ, ಗೀಗೀಪದ, ಲಾವಣಿ, ಸಾಂಬಾಳ, ಕರಡಿ ಮಜಲು, ನೃತ್ಯ, ವಿಭಿನ್ನ ಕಲೆಗಳು ಗೋಚರಿಸಲಿವೆ. ನಾಟಕ ನಯನ ಮನೋಹರ ದೃಶ್ಯ ನೀಡಲಿದೆ.

ಗೌರವ ಪಾಸ್ ಲಭ್ಯ
ನಾಟಕದ ವೀಕ್ಷಣೆಗೆ ರೂ.250 ಗೌರವ ಪಾಸ್ ವ್ಯವಸ್ಥೆ ಇದೆ. ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ, ರಂಗಾಯಣ ಆವರಣ, ಕರ್ನಾಟಕ ಕಾಲೇಜು ಮೈದಾನದಲ್ಲಿ ಪಾಸ್ ದೊರೆಯಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!