ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಕ್ತ ಐಪಿಎಲ್ ಆವೃತ್ತಿಯ 60ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 29 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಕೆಕೆಆರ್, ಬ್ಯಾಟಿಂಗ್ ಅಬ್ಬರ ಹಾಗೂ ಎದುರಾಳಿ ತಂಡದ ಕಳಪೆ ಫೀಲ್ಡಿಂಗ್ ನೆರವಿನಿಂದ ಸುಲಭ ಜಯ ತನ್ನದಾಗಿಸಿಕೊಂಡಿತು.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ನಿಗದಿತ 20 ಓವರ್‌ಗಳಲ್ಲಿ 247 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಗುಜರಾತ್ ವಿರುದ್ಧ ಕೆಕೆಆರ್ ದಾಖಲಿಸಿದ ಗರಿಷ್ಠ ಸ್ಕೋರ್ ಆಗಿದೆ.
ಆರಂಭದಲ್ಲಿ ನಾಯಕ ಅಜಿಂಕ್ಯ ರಹಾನೆ (14 ರನ್) ಬೇಗನೆ ಔಟಾದರೂ, ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಗುಜರಾತ್ ಫೀಲ್ಡರ್‌ಗಳು ನೀಡಿದ ಎರಡು ಜೀವದಾನಗಳ ಲಾಭ ಪಡೆದ ಅಲೆನ್, 35 ಎಸೆತಗಳಲ್ಲಿ 93 ರನ್ ಚಚ್ಚಿ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಅಂಗ್ಕ್ರಿಶ್ ರಘುವಂಶಿ (33 ಎಸೆತಗಳಲ್ಲಿ ಅಜೇಯ 82 ರನ್) ಮತ್ತು ಕ್ಯಾಮರೂನ್ ಗ್ರೀನ್ (ಅಜೇಯ 52 ರನ್) ಮೂರನೇ ವಿಕೆಟ್‌ಗೆ ಕೇವಲ 52 ಎಸೆತಗಳಲ್ಲಿ 108 ರನ್‌ಗಳ ಅಜೇಯ ಪಾಲುದಾರಿಕೆ ನಡೆಸಿ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ ಮತ್ತು ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.
248 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ (23 ರನ್) ಗಾಯಗೊಂಡು ನಿವೃತ್ತರಾಗಿದ್ದು ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿತು. ಪವರ್ ಪ್ಲೇ ಬಳಿಕ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದ ಕೆಕೆಆರ್ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ನಾಯಕನ ಆಟವಾಡಿದ ಶುಭ್‌ಮನ್ ಗಿಲ್ 33 ಎಸೆತಗಳಲ್ಲಿ 85 ರನ್ ಸಿಡಿಸಿ ಹೋರಾಟ ನಡೆಸಿದರು. ಜೋಸ್ ಬಟ್ಲರ್ 57 ರನ್ ಗಳಿಸಿದರೂ, ರನ್ ಗಳಿಕೆಯ ವೇಗ ನಿಧಾನಗತಿಯಲ್ಲಿತ್ತು. ಗಿಲ್ ಔಟಾದ ಬಳಿಕ ಮತ್ತೆ ಬ್ಯಾಟಿಂಗ್‌ಗೆ ಬಂದ ಸಾಯಿ ಸುದರ್ಶನ್ ಅಜೇಯ 57 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಕೋಲ್ಕತ್ತಾ ಪರ ಸುನಿಲ್ ನರೈನ್ ಅತ್ಯಧಿಕ 2 ವಿಕೆಟ್ ಪಡೆದು ಗಮನ ಸೆಳೆದರು.



