ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ (16) ತಲೆ ಕಡಿದು ಹತ್ಯೆ ಮಾಡಿದ ಆರೋಪಿ ಮೃತದೇಹ ಪತ್ತೆಯಾಗಿದೆ.
ಬಾಲಕಿಯನ್ನು ತಲೆ ಕಡಿದು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಮ್ಮಿಯಾಲದ ತನ್ನ ಮನೆಯ ಸಮೀಪದಲ್ಲೇ ಪ್ರಕಾಶ್ ನೇಣಿಗೆ ಶರಣಾಗಿದ್ದಾನೆ.
ಇನ್ನು ಬಾಲಕಿಯ ರುಂಡಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಯುವತಿಯ ರುಂಡ ಕಡಿದು ಆರೋಪಿ ತೆಗೆದುಕೊಂಡು ಹೋಗಿದ್ದ. ಆರೋಪಿಯ ಮೃತದೇಹ ಪತ್ತೆಯಾಗಿದೆ ಹೊರತು ಆತ ತೆಗೆದುಕೊಂಡಿದ್ದ ಬಾಲಕಿಯ ರುಂಡ ಪತ್ತೆಯಾಗಿಲ್ಲ.
ಅಪ್ರಾಪ್ತ ಬಾಲಕಿ ಮೀನಾಳ ಜೊತೆ ಆರೋಪಿ ಮೊಣ್ಣಂಡ ಪ್ರಕಾಶ್ ಮದುವೆಗೆ ಮುಂದಾಗಿದ್ದನು. ಹೀಗಾಗಿ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದ. ಆದರೆ ಬಾಲ್ಯವಿವಾಹದ ವಿಚಾರ ತಿಳಿದ ಸೋಮವಾರ ಪೇಟೆ ಪೋಲೀಸರು ಬಾಲಕಿಯ ನಿಶ್ಚಿತಾರ್ಥ ತಡೆದು ಬುದ್ದಿ ಹೇಳಿದ್ದರು. ಹೀಗಾಗಿ ಬಾಲಕಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲು ಎರಡು ಕುಟುಂಬಗಳು ಮುಂದಾಗಿದ್ದವು.
ಇದರಿಂದ ತೀವ್ರ ಸಿಟ್ಟಿಗೆದ್ದ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಜಗಳವಾಡಿದ್ದ. ಹತ್ಯೆಗೂ ಮುನ್ನ ಹುಡುಗಿಯ ಮನೆಗೆ ನುಗ್ಗಿದ್ದ ಹುಡುಗಿಯ ತಂದೆ ತಾಯಿಯೊಂದಿಗೆ ಕೂಡ ಗಲಾಟೆ ಮಾಡಿ ಅವರ ಮೇಲೆ ಕೂಡ ಹಲ್ಲೆ ನಡೆಸಿದ್ದ, ಬಳಿಕ ಬಾಲಕಿ ಮೀನಾಳನ್ನು 100 ಮೀಟರ್ ದೂರ ಬಲವಂತಾಗಿ ಮನೆಯಿಂದ ಎಳೆದೊಯ್ದು ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದನು.
ಸೂರ್ಲಬ್ಬಿ ಶಾಲೆಯ 10ನೇ ತರಗತಿಯ ಏಕೈಕ ವಿದ್ಯಾರ್ಥಿಯಾಗಿದ್ದ ಯು.ಎಸ್.ಮೀನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಇದರಿಂದ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಬಂದಂತಾಗಿತ್ತು. ಪರೀಕ್ಷೆಯಲ್ಲಿ ಪಾಸ್ ಆಗಿದ್ದರಿಂದ ಮೀನ ಮಾತ್ರವಲ್ಲದೆ ಇಡೀ ಗ್ರಾಮವೇ ಖುಷಿಯಲ್ಲಿತ್ತು. ಅಷ್ಟರಲ್ಲೇ ರಾತ್ರಿ ಅವಳನ್ನು ಭೀಕರವಾಗಿ ಹತ್ಯೆ ನಡೆದಿತ್ತು.ಇಡೀ ಕೊಡಗು ಬೆಚ್ಚಿ ಬಿದ್ದಿದೆ.