Friday, June 2, 2023

Latest Posts

ಕೊಡವ ಅಭಿವೃದ್ಧಿ ನಿಗಮ ಘೋಷಣೆ: ರಾಜ್ಯ ಸರ್ಕಾರದ ಕ್ರಮಕ್ಕೆ ಅಖಿಲ ಕೊಡವ ಸಮಾಜ ಮೆಚ್ಚುಗೆ

ಹೊಸದಿಗಂತ ವರದಿ ಮಡಿಕೇರಿ:

ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಂತಿರುವ ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ತಿಳಿಸಿವೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರುಗಳು, ಶನಿವಾರ ನಾಪೊಕ್ಲುವಿನಲ್ಲಿ ಆಯೋಜಿಸಲಾಗಿದ್ದ ಅಪ್ಪಚೆಟ್ಟೋಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯಂತೆ ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಸರ್ಕಾರ ನುಡಿದಂತೆ ನಡೆದುಕೊಂಡಿದೆ.‌ ಇದಕ್ಕಾಗಿ ಮುಖ್ಯಮಂತ್ರಿಗಳು, ಶಾಸಕರು ಹಾಗೂ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸಿರುವ ಯುಕೊ ಸಂಸ್ಥೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಬಳಗದವರ ಶ್ರಮ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಜನಾಂಗದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ತಿಳಿಸಿರುವ ಅವರು, ಕೊಡವ ಜನಾಂಗ ಎನ್ನುವುದು ಒಂದು ವಿಭಿನ್ನ ಹಾಗೂ ವಿಶೇಷ ಜನಾಂಗವಾಗಿದ್ದು, ಇಂದು ಜನಸಂಖ್ಯೆಯ ಆಧಾರವನ್ನು ಹಾಗೂ ಆರ್ಥಿಕವಾಗಿ ತೆಗೆದುಕೊಂಡರೆ ಕೊಡವ ಜನಾಂಗ ಅಳಿವಿನಂಚಿನಲ್ಲಿರುವ ಜನಾಂಗವಾಗಿದೆ. ಆದರೆ ಈ ದೇಶಕ್ಕೆ ಒಬ್ಬರು ಸೇನಾ ಮಹಾದಂಡನಾಯಕ ಫೀ.ಮಾ ಕಾರ್ಯಪ್ಪ ಹಾಗೂ ಮತ್ತೊಬ್ಬರು ಜನರಲ್ ತಿಮ್ಮಯ್ಯ ಸೇರಿದಂತೆ ಲೆಕ್ಕವಿಲ್ಲದಷ್ಟು ಸೇನಾಧಿಕಾರಿಗಳು ಹಾಗೂ ಅಸಂಖ್ಯಾತ ವೀರ ಸೈನಿಕರನ್ನು ಕೊಡಗುಗೆಯಾಗಿ ನೀಡಿರುವ ಹೆಗ್ಗಳಿಕೆ ಕೊಡವ ಜನಾಂಗಕ್ಕಿದೆ. ಇದೀಗ ತಡವಾಗಿ ಆದರೂ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಅಳಿವಿನಂಚಿನಲ್ಲಿರುವ ಕೊಡವ ಜನಾಂಗದ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಿದ್ದುಪಡಿಗೆ ಒತ್ತಾಯ: ಕೊಡವ ಅಭಿವೃದ್ಧಿ ನಿಗಮದ ಮೂಲಕ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಕೊಡವರ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಒತ್ತು ನೀಡಬೇಕಿದೆ. ಇದರ ಜೊತೆ ಜೊತೆಗೆ ‘ಕೊಡಗರು’ ಎಂದಿರುವ ಸರ್ಕಾರದ ಎಲ್ಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ “ಕೊಡವರು” ಎಂಬ ಆದೇಶವನ್ನು ಹೊರಡಿಸಬೇಕಿದೆ. ಕೊಡಗರು ಎಂಬ ಜನಾಂಗವೇ ಅಸ್ತಿತ್ವದಲ್ಲಿಲ್ಲ ಎಂಬ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಯೂತ್ ವಿಂಗ್ ಒತ್ತಾಯಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!