ಕೊಡವರು ತಮ್ಮ ಸಾಂಸ್ಕೃತಿಕ- ಪಾರಂಪರಿಕ ಕಟ್ಟುಪಾಡುಗಳನ್ನು ಉಸಿಕೊಳ್ಳಬೇಕು:ಮಂಜು ಚಿಣ್ಣಪ್ಪ

ಹೊಸದಿಗಂತ ವರದಿ ಮಡಿಕೇರಿ: 

ನಂಬಿಕೆಯ ಬುನಾದಿಯ ಮೇಲೆ ಅನಾದಿಕಾಲದಿಂದಲೂ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವ ಪಾರಂಪರಿಕ ಹಿರಿಮೆಯನ್ನು ಅನುಸರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿನ ಪೀಳಿಗೆಗಿದೆ ಎಂದು ಯುನೈಟೆಡ್ ಕೊಡವ ಆರ್ಗನೈಝೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಭಿಪ್ರಾಯಪಟ್ಟರು. ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ ಶ್ರೀ ಆದಿಕಾವೇರಿ ಕೊಡವ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕೊಡವರ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವ್ಯವಸ್ಥೆಯು ವೈಜ್ಞಾನಿಕ ಹಿನ್ನೆಲೆಯೊಂದಿಗೆ ರೂಪಿಸಲ್ಪಟ್ಟಿದ್ದು, ಕೊಡವರಿಗೆ ಜಾಗತಿಕವಾಗಿ ತುಲನೆ ಮಾಡಿದರೆ ಒಂದು ಅತ್ಯುನ್ನತವಾದ ಸಾಮಾಜಿಕ ಬದುಕನ್ನು ಕಟ್ಟಿಕೊಟ್ಟಿತ್ತು. ಜಗತ್ತಿನ ಎಲ್ಲಾ ಸಾಮಾಜಿಕ ಹಾಗೂ ಆಡಳಿತಾತ್ಮಕ ದೃಷ್ಟಿಕೋನದಿಂದಲೂ ಸಹ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿತ್ತು. ಇದರಿಂದಾಗಿಯೇ ನಿರಂತರ ಆಕ್ರಮಣಗಳ ಹೊರತಾಗಿಯೂ ಕೊಡವರು ತಮ್ಮ ಅಸ್ತಿತ್ವವನ್ನು ಇಷ್ಟರ ಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.

ಶೋಷಿತ ಸಮಾಜ

ಕೊಡವರು ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ರಾಜಕೀಯ ಶೋಷಣೆಗೆ ಒಳಪಟ್ಟ ಹಾಗೂ ಅತೀ ಹೆಚ್ಚು ಹತ್ಯಾಕಾಂಡಗಳನ್ನು ಎದುರಿಸಿದ ಜನಾಂಗವಾಗಿದೆ ಎಂದರು. ಅನಾದಿಕಾಲದಿಂದಲೂ ವಿವಿಧ ಸಂಸ್ಥಾನಗಳು ಹಾಗೂ ಸ್ವತಃ ಕೊಡಗನ್ನು ಆಳಿದ ರಾಜರುಗಳು ನಡೆಸಿದ  ಹತ್ಯಾಕಾಂಡಗಳನ್ನು ಎದುರಿಸಿದ್ದ ಕೊಡವರು ಆನಂತರದಲ್ಲಿ ಟಿಪ್ಪುವಿನ ಮೋಸದ ದೇವಾಟ್ ಪರಂಬು ಹತ್ಯಾಕಾಂಡದಿಂದಾಗಿ ಸಂಪೂರ್ಣ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿತ್ತು. ಇಲ್ಲದಿದ್ದರೆ ಇಂದು ಕೊಡವರ ಜನಸಂಖ್ಯೆಯು ಸುಮಾರು 50ಲಕ್ಷದಷ್ಟು ಇರುತ್ತಿತ್ತು ಎಂದು ಸ್ಮರಿಸಿದರು.

ಇದೀಗ ಅಳಿದುಳಿದು ಅಲ್ಪಸಂಖ್ಯಾತರಾಗಿ ಸ್ವಯಂ ಬದುಕು ಕಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿಯೂ ಸಹ ಸಾಂಸ್ಕೃತಿಕವಾಗಿ ಹಾಗೂ ಪಾರಂಪರಿಕವಾಗಿ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಹಿರಿಯರು ಕಾಪಾಡಿಕೊಂಡು ಬಂದಿರುವ ಪಾರಂಪರಿಕ, ಸಾಂಸ್ಕೃತಿಕ ನಂಬಿಕೆಯ ಕಟ್ಟುಪಾಡುಗಳು ಮಾತ್ರವೇ ನಮ್ಮನ್ನು ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠರನ್ನಾಗಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ನಮ್ಮ ಐನ್ ಮನೆ, ಕೈಮಡ, ಮಂದ್ ಮಾನಿಗಳನ್ನೊಳಗೊಂಡ ಕೊಡವ ಸನ್ನಿಧಾನದಂತಿರುವ ನಮ್ಮ ಆರೋಡ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂಬುದನ್ನು ನೆನಪು ಮಾಡಿಕೊಂಡರು. ನಿತ್ಯ ಕೊಡವರ ಐನ್ ಮನೆಗಳಲ್ಲಿ ದೀಪ ಬೆಳಗುವಂತಾಗಬೇಕು. ನಮ್ಮ ಹಬ್ಬ ಹರಿದಿನಗಳನ್ನು ಅದರ ಮಹತ್ವವನ್ನರಿತು ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸುವಂತಾಗಬೇಕು. ಇದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!