August 30, 2026
Sunday, August 30, 2026
spot_img

KPSC ನೇಮಕಾತಿ ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬಂಧನ, ತನಿಖೆ ತೀವ್ರಗೊಳಿಸಿದ ಸಿಐಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಸಾಲು ಸಾಲು ಆಕ್ರಮಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್‌ ಅಧಿಕಾರಿ ಜ್ಷಾನೇಂದ್ರ ಕುಮಾರ್‌ ಅವರ ಬಂಧನದ ಬೆನ್ನೆಲ್ಲೇ ಇದೀಗ ಈ ಹಗರಣದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಸಂದರ್ಭದಲ್ಲಿ ಜ್ಞಾನೇಂದ್ರ ಕುಮಾರ್ ಅವರು ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು ಪರೀಕ್ಷಾ ಪ್ರಕ್ರಿಯೆ, ಪ್ರಶ್ನೆ ಪತ್ರಿಕೆಗಳ ನಿರ್ವಹಣೆ ಮತ್ತು ಫಲಿತಾಂಶದ ಜವಾಬ್ದಾರಿ ಇವರ ಮೇಲಿದ್ದ ಕಾರಣ, ಅಕ್ರಮದಲ್ಲಿ ಇವರದ್ದೇ ಪ್ರಮುಖ ಪಾತ್ರ ಎಂದು ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ದೃಢಪಡಿಸಿದೆ.

ತನಿಖೆಯ ದಿಕ್ಕು ತಪ್ಪಿಸಲು ಯತ್ನ

ಕಳೆದ ಶುಕ್ರವಾರ ಜ್ಞಾನೇಂದ್ರ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಸತತ ಎರಡು ದಿನಗಳ ಕಾಲ ಒಟ್ಟು 20 ಗಂಟೆಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ಅನಿವಾರ್ಯವಾಗಿ ತಡರಾತ್ರಿ ಅವರನ್ನು ಬಂಧಿಸಲಾಗಿದೆ.

ತೀವ್ರಗೊಂಡ ಸಿಐಡಿ ತನಿಖೆ

ಅರ್ಹ ಅಭ್ಯರ್ಥಿಗಳನ್ನು ಬದಿಗೊತ್ತಿ, ಹಣದ ಆಮಿಷಕ್ಕೆ ಒಳಗಾಗಿ ಅನರ್ಹರಿಗೆ ಹುದ್ದೆ ನೀಡಲು ಈ ಅಕ್ರಮ ನಡೆಸಲಾಗಿದೆಯೇ? ಮಧ್ಯವರ್ತಿಗಳು ಯಾರು? ಎಷ್ಟು ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ? ಎಂಬ ಮಹತ್ವದ ಅಂಶಗಳ ಬಗ್ಗೆ ಸಿಐಡಿ ಅಧಿಕಾರಿಗಳು ಈಗ ಮಾಹಿತಿ ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ:

ಇತರ ಆರೋಪಿಗಳಿಗೂ ಬಂಧನದ ಭೀತಿ

ಕೆಪಿಎಸ್‌ಸಿಯ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯೇ ಸಿಐಡಿ ಕಡ್ಡಾಗೆ ಬಿದ್ದಿರುವುದರಿಂದ, ಈ ಅಕ್ರಮಕ್ಕೆ ಸಾಥ್ ನೀಡಿದ್ದ ಕೆಪಿಎಸ್‌ಸಿಯ ಇತರ ಕೆಲವು ಸಿಬ್ಬಂದಿ ಹಾಗೂ ಮಧ್ಯವರ್ತಿಗಳಿಗೂ ಬಂಧನದ ಭೀತಿ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಅಧಿಕಾರಿಗಳ ಹೆಸರುಗಳು ಹೊರಬರುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !