ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿ ಭಾಯ್ ಯಶ್ ನಟನೆಯ ಹೊಸ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸ್ತಿದೆ. ಮೊದಲ ದಿನ ರಿಲೀಸ್ ಆದಾಗ ಬಾಕ್ಸ್ ಆಫೀಸ್‌ನಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದ ಈ ಸಿನಿಮಾ, ಆಮೇಲೆ ಕಲೆಕ್ಷನ್ ಸ್ವಲ್ಪ ಕಮ್ಮಿ ಆಗ್ತಾ ಬಂದ್ರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಹವಾ ಕಂಟಿನ್ಯೂ ಮಾಡಿದೆ. ವೀಕೆಂಡ್ ಅಲ್ಲಿ ಸಾಲು ಸಾಲು ರಜೆಗಳಿದ್ರೂ ಇಂಡಿಯಾ ನೆಟ್ ಕಲೆಕ್ಷನ್‌ನಲ್ಲಿ ಸ್ವಲ್ಪ ಡೌನ್ ಕಂಡಿದೆ. ಆದರೆ, ಸಿನಿಮಾ ಗಳಿಸಿರೋ ಒಟ್ಟು ಲೆಕ್ಕ ನೋಡಿದ್ರೆ ಈಗಾಗಲೇ ವರ್ಲ್ಡ್‌ವೈಡ್ 250 ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ.

ಶನಿವಾರ ಒಂದೇ ದಿನ 17,612 ಶೋಗಳಿಂದ ‘ಟಾಕ್ಸಿಕ್’ 25.15 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಿಂದಾಗಿ ಭಾರತದಲ್ಲಿ ಸಿನಿಮಾ ಮಾಡಿದ ಒಟ್ಟು ನೆಟ್ ಕಲೆಕ್ಷನ್ 191.10 ಕೋಟಿಗೆ ತಲುಪಿದ್ದು, ಇಂಡಿಯಾ ಗ್ರಾಸ್ 228.25 ಕೋಟಿ ರೂಪಾಯಿ ಆಗಿದೆ. ಇನ್ನು ವಿದೇಶಗಳಲ್ಲೂ ಯಶ್ ಹವಾ ಜೋರಾಗಿದ್ದು, ಶನಿವಾರ 4 ಕೋಟಿ ಬಾಚಿಕೊಂಡಿದೆ. ಅಲ್ಲಿಗೆ ಇದುವರೆಗೆ ಒಟ್ಟು 27.25 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಂಡಿದೆ. ಶನಿವಾರದ ಗಳಿಕೆ ಸೇರಿಸಿದರೆ ‘ಟಾಕ್ಸಿಕ್’ ಚಿತ್ರದ ಒಟ್ಟು ವರ್ಲ್ಡ್‌ವೈಡ್ ಗ್ರಾಸ್ ಕಲೆಕ್ಷನ್ ಬರೋಬ್ಬರಿ 255.50 ಕೋಟಿ ರೂಪಾಯಿ ಆಗಿದೆ.

ಬುಧವಾರ ರಿಲೀಸ್ ಆದ ಮೊದಲ ದಿನವೇ ‘ಟಾಕ್ಸಿಕ್’ ಇಂಡಿಯಾದಲ್ಲಿ ಬರೋಬ್ಬರಿ 101.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಆದರೆ, ಎರಡನೇ ದಿನ ಅಂದ್ರೆ ಗುರುವಾರ ಕಲೆಕ್ಷನ್ ಏಕಾಏಕಿ 62.8% ನಷ್ಟು ಡೌನ್ ಆಗಿ, 37.65 ಕೋಟಿ ರೂಪಾಯಿ ಬಂದಿತ್ತು. ಶುಕ್ರವಾರ ಮತ್ತಷ್ಟು ಕಮ್ಮಿಯಾಗಿ 27.20 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿತ್ತು. ಶನಿವಾರ ಅಂದ್ರೆ ನಾಲ್ಕನೇ ದಿನ 25.15 ಕೋಟಿ ಗಳಿಸಿದ್ದು, ಶೇಕಡಾವಾರು ಇಳಿಕೆ ಸ್ವಲ್ಪ ಕಮ್ಮಿ ಇದೆ. ಆದ್ರೆ, ಹೀಗೆ ದಿನ ದಿನಕ್ಕೂ ಕಲೆಕ್ಷನ್ ಡೌನ್ ಆಗ್ತಿರೋದು ಮುಂದೆ ಸಿನಿಮಾ ಎಷ್ಟು ದಿನ ಗಟ್ಟಿಯಾಗಿ ನಿಲ್ಲುತ್ತೆ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

ವಿಶೇಷ ಏನಪ್ಪಾ ಅಂದ್ರೆ ‘ಟಾಕ್ಸಿಕ್’ ಒಂದು ದೊಡ್ಡ ಸಾಧನೆ ಮಾಡಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರ ‘ದೃಶ್ಯಂ 3’ ಸಿನಿಮಾ ಜಾಗತಿಕವಾಗಿ ಗಳಿಸಿದ್ದ 239.83 ಕೋಟಿ ರೂಪಾಯಿ ಲೈಫ್‌ಟೈಮ್ ಕಲೆಕ್ಷನ್ ಅನ್ನು ಯಶ್ ಸಿನಿಮಾ ಮೀರಿಸಿದೆ. ಸಾಕ್ನಿಲ್ಕ್ ರಿಪೋರ್ಟ್ ಪ್ರಕಾರ, ಈ ವರುಷದ ಹೈಯೆಸ್ಟ್ ಗ್ರಾಸ್ ಕಲೆಕ್ಷನ್ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಈಗ 8ನೇ ಸ್ಥಾನದಲ್ಲಿದೆ. ಅಕ್ಷಯ್ ಕುಮಾರ್ ಅವರ ‘ಭೂತ್ ಬಾಂಗ್ಲಾ’ (270 ಕೋಟಿ+) ರೆಕಾರ್ಡ್ ಮುರಿಯೋಕೆ ಯಶ್ ಪಡೆ ರೆಡಿಯಾಗಿದೆ. ಕಲೆಕ್ಷನ್ ಸ್ವಲ್ಪ ಕಮ್ಮಿ ಆಗ್ತಿದ್ರೂ, ಲಾಂಗ್ ರನ್‌ನಲ್ಲಿ ‘ಟಾಕ್ಸಿಕ್’ ಸಿನಿಮಾ ಇನ್ಯಾವ ದಾಖಲೆ ಮಾಡುತ್ತೆ ಅಂತ ಕಾದು ನೋಡಬೇಕಿದೆ.



