Monday, March 27, 2023

Latest Posts

‘ಒಪ್ಪಂದದ ಮೇರೆ’ಗೆ ‘KSRTC ಬಸ್’ ಬುಕ್ ಮಾಡುವವರಿಗೆ ಬಿಗ್ ಶಾಕ್: ದರ ಹೆಚ್ಚಳ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಎಸ್ ಆರ್ ಟಿಸಿಯಿಂದ ಸಾಂದರ್ಭಿಕ ಒಪ್ಪಂದದ ದರಗಳನ್ನು ಹೆಚ್ಚಳ ಮಾಡಲಾಗಿದೆ. ಇಂಧನದ ದರ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ಒಪ್ಪಂದದ ಮೇರೆಗೆ ಕೊಂಡೊಯ್ಯುವಂತ ಕೆಎಸ್ಆರ್ ಟಿಸಿ ಬಸ್ ದರವನ್ನು ಹೆಚ್ಚಳ ಮಾಡಲಾಗಿದೆ.

ಕೆಎಸ್ ಆರ್ ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಇಂಧನ ದರ ಹಾಗೂ ಇತರೆ ವೆಚ್ಚಗಳ ಹೆಚ್ಚಳದಿಂದ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿರುವುದನ್ನು ಪರಿಗಣಿಸಿ, ಸಾಂದರ್ಭಿಕ ಒಪ್ಪಂದದ ದರ ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ.

ಪರಿಷ್ಕೃತ ದರದಂತೆ ಕರ್ನಾಟಕ ಸಾರಿಗೆ ಸಂಸ್ಥೆಯ 55, 47 ಮತ್ತು 49 ಸೀಟ್ ಗಳ ಬಸ್ ಗಳಿಗೆ ಕನಿಷ್ಠ 300 ಕಿಲೋಮೀಟರ್ ದಿನಕ್ಕೆ ನಿಗದಿಯಂತೆ ರಾಜ್ಯದೊಳೆಗೆ ಪ್ರತಿ ಕಿಲೋಮೀಟರ್ ಗೆ 44 ರೂ ನಿಗದಿ ಪಡಿಸಲಾಗಿದೆ. ಅಂತರರಾಜ್ಯಕ್ಕೆ ಕರೆದೊಯ್ಯುವಂತ ಬಸ್ ಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.47 ನಿಗದಿ ಪಡಿಸಲಾಗಿದೆ.

ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ ದರವನ್ನು ರಾಜ್ಯದೊಳಗೆ 46 ರೂ, ಅಂತಾರಾಜ್ಯಕ್ಕೆ 51 ರೂ ನಿಗದಿ ಪಡಿಸಲಾಗಿದೆ. ರಾಜಹಂಸ 39 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ದಿನಕ್ಕೆ ಕನಿಷ್ಠ ನಿಗದಿಪಡಿಸಿ, ರಾಜ್ಯದೊಳಗೆ 49 ರೂ., ಹೊರರಾಜ್ಯಕ್ಕೆ 53 ರೂ. ನಿಗದಿ ಪಡಿಸಲಾಗಿದೆ. ರಾಜಹಂಸ 12 ಮೀಟರ್ ಚಾಸಿಸ್ ನ 44 ಆಸನಗಳ ಬಸ್ ದರವನ್ನು 300 ಕಿಲೋಮೀಟರ್ ಕನಿಷ್ಠ ದಿನಕ್ಕೆ ನಿಗದಿ ಪಡಿಸಿ, ರಾಜ್ಯದೊಳಗೆ 51 ರೂ ಪ್ರತಿ ಕಿಲೋಮೀಟರ್ ಗೆ ಹಾಗೂ ಹೊರ ರಾಜ್ಯಗಳಿಗೆ ಪ್ರತಿ ಕಿಲೋಮೀಟರ್ ಗೆ ರೂ.55 ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾರಿಗೊಳಿಸಿರುವಂತ ಪರಿಷ್ಕೃತ ದರಗಳು ಡಿ.2ರಿಂದ ಜಾರಿಗೆ ಬರಲಿವೆ. ಈ ಆದೇಶ ಹೊರಡಿಸುವ ಮೊದಲು ಬುಕ್ಕಿಂಗ್ ಮಾಡಿಕೊಂಡಿರುವ ಒಪ್ಪಂದದ ವಾಹನಗಳಿಗೆ, ಹಳೆಯ ದರಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!