ಕೊಡಗು ಜಿಲ್ಲೆಯಾದ್ಯಂತ‌ ಕೆಎಸ್ ಆರ್ ಟಿಸಿ ಬಸ್ ಸಂಚಾರ: ಮುಂದಿನ ಸಭೆಯಲ್ಲಿ ನಿರ್ಧಾರ ಎಂದ ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಮಡಿಕೇರಿ:

ಜಿಲ್ಲೆಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚರಿಸಲು ಅವಕಾಶ ಮಾಡಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ಬರುತ್ತಿದ್ದು, ಈ ಸಂಬಂಧ ಮುಂದಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಬಿ.ಸಿ.ಸತೀಶ ಅವರು ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,‘ಗ್ರಾಮ ವಾಸ್ತವ್ಯ’ ಸಂದರ್ಭದಲ್ಲಿ ಅಗತ್ಯ ಬಸ್ ಸೇವೆ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಮಾಡುತ್ತಾರೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆದ್ಯತೆ ಮೇಲೆ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.
ಸದ್ಯ ಜಿಲ್ಲೆಯಾದ್ಯಂತ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸಂಬಂಧ ಮುಂದಿನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಾದ್ಯಂತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚರಿಸಲು ಅವಕಾಶ ಮಾಡಬೇಕೆಂದು ಹಲವಾರು ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಕೆಎಸ್‍ಆರ್‍ಟಿಸಿ ಪರವಾಗಿ ನ್ಯಾಯವಾದಿ ವೆಂಕಟರಮಣಪ್ಪ, ಹಾಗೂ ಖಾಸಗಿ ಬಸ್ ಮಾಲಕರ ಪರವಾಗಿ ನ್ಯಾಯವಾದಿ ನಾಗೇಶ್ ಅವರು ಸಭೆಯಲ್ಲಿ ವಿಷಯ ಮಂಡಿಸಿದರು.
ಈ ಬಗ್ಗೆ ಎರಡು ಕಡೆಯಿಂದ ವಾದ ಆಲಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಇದಕ್ಕೂ ಮೊದಲು ನಡೆದ ರಸ್ತೆ ಸುರಕ್ಷತಾ ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ, ಅಗತ್ಯವಿರುವ ಕಡೆ ರಸ್ತೆ ಸುರಕ್ಷತಾ ಮಾಹಿತಿಯ ಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ರಸ್ತೆ ಸುರಕ್ಷತೆ ಸಂಬಂಧ ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ನಿರ್ದೇಶನ ನೀಡಿದರು.
ಬಸ್ ಸಂಚಾರಕ್ಕೆ ತೊಡಕು: ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ, ರಾಜಾಸೀಟು ಬಳಿ ವಾರಾಂತ್ಯದಲ್ಲಿ ಖಾಸಗಿ ಬಸ್‍ಗಳ ಸಂಚಾರಕ್ಕೆ ತುಂಬಾ ತೊಡಕಾಗುತ್ತದೆ. ಆದ್ದರಿಂದ ರಾಜಸೀಟು ಬಳಿ ಪಾರ್ಕಿಂಗ್‍ಗೆ ಅವಕಾಶ ಮಾಡಬಾರದು ಎಂದು ಸಲಹೆ ಮಾಡಿದರು.
ರಾಜ್ ದರ್ಶನ್ ಹೊಟೇಲ್ ಬಳಿಯಿಂದ ಕುಂದುರುಮೊಟ್ಟೆ ದೇವಸ್ಥಾನದವರೆಗೆ ಪ್ರವಾಸಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಬಾರದು ಎಂದು ರಮೇಶ್ ಜೋಯಪ್ಪ ಅವರು ಕೋರಿದರು.
ಗೋಣಿಕೊಪ್ಪ-ಮೈಸೂರು ರಸ್ತೆಯ ಚೆನ್ನಂಗಿ ಹಳ್ಳ ಬಳಿ ಆಗಾಗ ಅಪಘಾತಗಳು ಸಂಭವಿಸುತ್ತಿದ್ದು, ಈ ಪ್ರದೇಶದಲ್ಲಿ ರಸ್ತೆ ಸುರಕ್ಷತೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರ ವಹಿಸಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಎಲ್ಲೆಲ್ಲಿ ಅವಶ್ಯವಿದೆಯೋ ಅಂತಹ ಕಡೆಗಳಲ್ಲಿ ಸೂಚನಾ ಫಲಕ ಜೊತೆಗೆ, ಸಿಸಿಟಿವಿ ಅಳವಡಿಸುವಂತೆ ಸೂಚಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ. ಡಿ.ಹೆಚ್ ಮೇದಪ್ಪ ಅವರು ಮಾತನಾಡಿ, ಮಡಿಕೇರಿ-ಮೈಸೂರು ರಸ್ತೆಯ ಚೈನ್‍ಗೇಟ್ ಬಳಿ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದೆ. ನಿಧಾನ ಗತಿಯಲ್ಲಿ ಚಲಿಸಿ ಎಂಬ ಸೂಚನಾ ಫಲಕ ಅಳವಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ನೆಲ್ಲಿಹುದಿಕೇರಿಯಲ್ಲಿ ಎರಡು ಬದಿಯೂ ವಾಹನ ನಿಲುಗಡೆ ಮಾಡುತ್ತಿದ್ದು, ಒಂದು ಕಡೆ ಮಾತ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ಮಾಡಬೇಕು ಎಂದು ಸಾರ್ವಜನಿಕರೊಬ್ಬರು ಕೋರಿದರು.
ಗೋಣಿಕೊಪ್ಪದ ಪೊನ್ನಂಪೇಟೆಗೆ ಹೋಗುವ ಮಾರ್ಗದ ಜಂಕ್ಷನ್‍ನಲ್ಲಿ ವಾಹನ ನಿಲುಗಡೆಯಿಂದ ತುಂಬಾ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ 60 ಮೀಟರ್ ದೂರದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು ಒಳ್ಳೆಯದು ಎಂದು ಸಾರ್ವಜನಿಕರೊಬ್ಬರು ಗಮನ ಸೆಳೆದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಇನ್ಸ್ಪೆಕ್ಟರ್ ರಾಮಚಂದ್ರ, ರೀಟಾ ಮತ್ತಿತರರು ಇದ್ದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ಆರ್‍ಟಿಒ ಕಚೇರಿ ಇನ್ಸ್ಪೆಕ್ಟರ್ ರಾಮಚಂದ್ರ, ರೀಟಾ ತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!