ಪ್ರಧಾನಿ ಭದ್ರತೆಯಲ್ಲಿ ಲೋಪ | ಪಂಜಾಬ್ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ನಳಿನ್‌

ಹೊಸದಿಗಂತ ವರದಿ,ಮಂಗಳೂರು:

ದೇಶದ ಪ್ರಧಾನ ಮತ್ರಿ ಪಂಜಾಬ್‌ನಲ್ಲಿ ಹಮ್ಮಿಕೊಂಡ ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿ ಕೊಡುವಲ್ಲಿ ಅಲ್ಲಿನ ರಾಜ್ಯ ಸರಕಾರ ವಿಫಲವಾಗಿದೆ. ರೈತರ ಹೋರಾಟದ ನೆಪದಲ್ಲಿ ಪ್ರಧಾನ ಮಂತ್ರಿಯವರ ಕಾರ್ಯಕ್ರಮವನ್ನು ರದ್ದು ಪಡಿಸಿದೆ. ಪ್ರಧಾನ ಮಂತ್ರಿ ರಾಜಕೀಯ ಪಕ್ಷಕ್ಕೆ ಸೀಮಿತರಲ್ಲ, ಅವರು ರಾಷ್ಟ್ರದ ಪ್ರಧಾನ ಮಂತ್ರಿ. ಅವರಿಗೆ ಭದ್ರತೆ ಮತ್ತು ಸಂಚಾರಕ್ಕೆ ಅವಕಾಶ ಮಾಡಿ ಕೊಡುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಪಂಜಾಬಿನ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಆಗ್ರಹಿಸಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ರದ್ದು ಪಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಹುನ್ನಾರ ಇದೆ. ಕಾಂಗ್ರೆಸ್ ಪಕ್ಷವೇ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರಧಾನ ಮಂತ್ರಿಯವರ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದೆ ಎಂದು ಆರೋಪಿಸಿದ ಅವರು, ಅಲ್ಲಿನ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಹತಾಶ ಕಾಂಗ್ರೆಸ್
ಕಾಂಗ್ರೆಸ್ ಪಕ್ಷ ಅಕಾರ ಕಳೆದುಕೊಂಡ ಹಲವು ಸಂದರ್ಭಗಳಲ್ಲಿ ಹತಾಶಗೊಂಡು ರಾಜಕಾರಣ ಮಾಡಿರುವುದನ್ನು ನಾವು ಕಂಡಿದ್ದೇವೆ. ಕೇಂದ್ರದಲ್ಲಿ ಅಕಾರ ಕಳೆದುಕೊಂಡ ಸಂದರ್ಭದಲ್ಲಿ ಇಂದಿರಾ ಗಾಂ ತುರ್ತು ಪರಿಸ್ಥಿತಿ ಹೇರಿದ್ದರು. ಕೇಂದ್ರದಲ್ಲಿ ಅಕಾರದಲ್ಲಿದ್ದ ಪಕ್ಷವು ಕೆಲವು ರಾಜ್ಯ ಸರಕಾರಗಳನ್ನು ಕಿತ್ತು ಹಾಕಿತ್ತು. ಅನೇಕ ರಾಜ್ಯಗಳಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ಅಸಹನೆ ವ್ಯಕ್ತ ಪಡಿಸಿದ್ದು ತಿಳಿದಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷರು, ಇದೀಗ ಪ್ರಧಾನ ಮಂತ್ರಿಯವರ ಕಾರ್ಯಕ್ರಮಕ್ಕೆ ತಡೆ ಒಡ್ಡಿದೆ ಎಂದರು.
ಕಾಂಗ್ರೆಸ್ ಪಕ್ಷವು ಇದೇ ರೀತಿಯ ನಡವಳಿಕೆಯನ್ನು ಮುಂದುವರಿಸಿದರೆ ಅಸ್ತಿತ್ವವವನ್ನು ಕಳೆದುಕೊಳ್ಳುವುದು ಖಚಿತ ಎಂದವರು ಹೇಳಿದರು.
ನಾಯಕತ್ವಕ್ಕಾಗಿ ಪೈಪೋಟಿ
ಇನ್ನು ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ಪಕ್ಷದ ನಾಯಕತ್ವದ ಮೇಲಾಟವಾಗಿದೆ. ನಾನೇ ನಾಯಕ ಎಂದು ತೋರಿಸುವುದಕ್ಕಾಗಿ ಡಿ.ಕೆ.ಶಿವಕುಮಾರ್ ರೂಪಿಸಿದ ತಂತ್ರ ಇದಾಗಿದೆ. ಹಾಗಾಗಿ ಇದು ಡಿ.ಕೆ.ಶಿವಕುಮಾರ್ ಹೋರಾಟವೇ ಹೊರತು ಕಾಂಗ್ರೆಸ್ ಪಕ್ಷದ ಹೋರಾಟವಲ್ಲ ಎಂದು ಬಣ್ಣಿಸಿದ ಅವರು, ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದರು.
ಆರು ವರ್ಷಗಳ ಕಾಲ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮೇಕೆದಾಟು ಯೋಜನೆಯ ಕುರಿತು ಮಾತನಾಡಿಲ್ಲ. ಮುಂದೆ ಒಂದೂವರೆ ವರ್ಷ ಅವರದೇ ಸಮ್ಮಿಶ್ರ ಸರಕಾರವಿದ್ದಾಗಲೂ ಯೋಜನೆಯ ಕುರಿತಾಗಿ ಪ್ರೀತಿ ತೋರಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಲೂ ಯೋಜನೆಯ ಸುದ್ದಿಗೇ ಹೋಗಲಿಲ್ಲ. ಆದರೆ ನಮ್ಮ ಕೇಂದ್ರ ಸರಕಾರ ಯೋಜನೆಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಮುಂದಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಮೇಕೆದಾಟು ಯೋಜನೆಯನ್ನು ಜಾರಿ ಮಾಡಲಿದೆ. ಅದು ಬಿಜೆಪಿ ಪಕ್ಷ ಮತ್ತು ಎರಡು ಸರಕಾರಗಳ ಜವಾಬ್ದಾರಿಯಾಗಿದೆ ಎಂದು ನಳಿನ್‌ಕುಮಾರ್ ನುಡಿದರು.
ಕೋವಿಡ್ ಮಾರ್ಗಸೂಚಿಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳ ಅಡಿಯಲ್ಲಿ ತಜ್ಞರ ಸಮಿತಿಯ ಸಲಹೆಯಂತೆ ರೂಪಿಸಲ್ಪಡುತ್ತದೆ. ಮುಖ್ಯಮಂತ್ರಿಗಳು ತಮಗೆ ಬೇಕಾದಂತೆ ಅದನ್ನು ರೂಪಿಸುವುದಿಲ್ಲ. ರಾಜ್ಯದ ಜನತೆಯ ಆರೋಗ್ಯ ಮತ್ತು ಪ್ರಾಣ ರಕ್ಷಣೆ ಮೊದಲ ಆದ್ಯತೆಯಾಗಬೇಕು. ಆ ದಿಸೆಯಲ್ಲಿ ಒಂದಷ್ಟು ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ರಾಜಕೀಯ ಪಕ್ಷಗಳಿಗೆ ಜನತೆಯ ಪ್ರಾಣ ಉಳಿಸುವುದು ಆದ್ಯತೆಯಾಗಬೇಕು. ಓಟು ಬ್ಯಾಂಕ್ ಆದ್ಯತೆಯಾಗಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಪಕ್ಷವನ್ನು ಛೇಡಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಮತ್ತು ಮೇಯರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!