Tuesday, March 28, 2023

Latest Posts

ʻಕರುನಾಡ ಕಿಂಗ್‌ʼನ ಗತ್ತು ಗಮ್ಮತ್ತು: ಸಾಫ್ಟ್‌ವೇರ್‌ ಉದ್ಯೋಗಿ ಸಂಬಳಕ್ಕಿಂತ ಕಮ್ಮಿಯಿಲ್ಲ ʻಗಜೇಂದ್ರʼನ ಆದಾಯ!

– ಚಂದ್ರಶೇಖರ ಎಸ್ ಚಿನಕೇಕರ

ಚಿಕ್ಕೋಡಿಯ ಗಜೇಂದ್ರ ಎಂಬ ಹೆಸರಿನ ಐದು ವರ್ಷದ ಕೋಣ ಕಳೆದ ಎರಡೂವರೆ ವರ್ಷಗಳಲ್ಲಿ ಅಂದಾಜು 30 ರಿಂದ 40 ಲಕ್ಷ ರೂ. ಆದಾಯ ತಂದು ಕೊಡುವ ಮೂಲಕ ಸಾಫ್ಟವೇರ್ ಎಂಜಿನೀಯರ್ ಪಡೆಯುವ ಸಂಬಳವನ್ನೂ ಮೀರಿಸಿದೆ.

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಿಲಾಸ ಗಣಪತಿ ನಾಯಿಕ ಎಂಬುವರು ಈ ಕೋಣ ಸಾಕಿದ್ದಾರೆ. ಜೊತೆಗೆ ಮುರ್ರಾ, ಜಾಫ್ರಾ, ಪಂಡರಪುರಿ, ಕರ್ನಾಳಿ, ಸೇರಿದಂತೆ ವಿವಿಧ ತಳಿಯ 50ಕ್ಕೂ ಹೆಚ್ಚು ಎಮ್ಮೆಗಳನ್ನು ಸಾಕಿದ್ದು, ಹರಿಯಾಣ ಮೂಲದ ಮುರ್ರಾ ಜಾತಿಯ ಕೋಣ ಗಜೇಂದ್ರ ಜನೆವರಿ 20, 2018ರಂದು ಮಂಗಸೂಳಿ ಗ್ರಾಮದಲ್ಲಿಯೇ ಜನಿಸಿದೆ. ಹುಟ್ಟಿದಾಗಲೆ 3 ಕ್ವಿಂಟಲ್ ಹೆಚ್ಚು ತೂಕವಿದ್ದ ಗಜೇಂದ್ರ ಇದೀಗ ಒಂದೂವರೆ ಟನ್ ತೂಕ ಹೊಂದಿದ್ದಾನೆ. ಪ್ರತಿ ದಿನ 7-8 ಎಮ್ಮೆಗಳ ಜೊತೆಗೂಡಿ ಸಂತಾನೋತ್ಪತ್ತಿಯಲ್ಲಿ ತೊಡಗಲು ಗಜೇಂದ್ರನನ್ನು ಬಳಸಲಾಗುತ್ತಿದೆ.

ಪ್ರತಿ ದಿನವೂ ಇದಕ್ಕೆ 2 ಬಾರಿ ಸ್ನಾನ ಮಾಡಿಸಲಾಗುತ್ತಿದ್ದು, 3 ಕಿ.ಮೀ ವಾಕಿಂಗ್ ಮಾಡಿಸಲಾಗುತ್ತದೆ. 15 ಲೀ. ಹಾಲು, 3 ಕೆಜಿ ಸೇಬು ಹಣ್ಣು, 4 ಕೆಜಿ ಹಿಂಡಿ, 2 ಕೆಜಿ ಹಿಟ್ಟು, ಒಣ ಮತ್ತು ಹಸಿ ಮೇವು ಸೇರಿದಂತೆ ಗಜೇಂದ್ರನಿಗೆ ಪ್ರತಿ ದಿನ 2 ಸಾವಿರ ರೂ. ಖರ್ಚು ಮಾಡಲಾಗುತ್ತದೆ. 50 ಎಮ್ಮೆಗಳೂ ಸೇರಿದಂತೆ ಗಜೇಂದ್ರನನ್ನು ನೋಡಿಕೊಳ್ಳಲು 7 ಜನ ಕೆಲಸ ಮಾಡುತ್ತಾರೆ.

ಕಳೆದ ಎರಡು ವರ್ಷಗಳಲ್ಲಿ ಹಿಂದ ಕೇಸರಿ, ವೀರ ಕೇಸರಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಶಸ್ತಿಗಳು ಗಜೇಂದ್ರನ ಮುಡಿಗೇರಿವೆ. ಪ್ರತಿ ತಿಂಗಳೂ ಮಾಲೀಕನಿಗೆ ಒಂದೂವರೆ ಲಕ್ಷ ರೂ. ಗೂ ಹೆಚ್ಚು ಆದಾಯ ತಂದು ಕೊಡುವ ಗಜೇಂದ್ರನಿಗೆ ಇದೀಗ ಮಾರುಕಟ್ಟೆಯಲ್ಲಿ ಒಂದೂವರೆ ಕೋಟಿ ರೂ. ಗೂ ಹೆಚ್ಚು ಬೇಡಿಕೆ ಇದ್ದು, ಖರೀದಿಸಲು ತಾ ಮುಂದು ನಾ ಮುಂದು ಎನ್ನುತ್ತಿದ್ದಾರೆ. ಇಷ್ಟು ಬೇಡಿಕೆ ಇರುವ ಗಜೇಂದ್ರನನ್ನು ಕರ್ನಾಟಕದ ಕಿಂಗ್‌ ಎಂತಲೇ ಬಿರುದು.

ಇದರ ವೀರ್ಯಕ್ಕೆ ಭಾರಿ ಬೆಲೆ ಇದ್ದು, ಒಮ್ಮೆ ಇದರ ವೀರ್ಯ ಸಂಗ್ರಹಿಸಿದರೆ 500ಕ್ಕೂ ಹೆಚ್ಚು ಸಿರೀಂಜ್ಗಳಲ್ಲಿ ಮಾರಾಟ ಮಾಡಬಹುದಂತೆ. ಇದರ ವೀರ್ಯ ಇರುವ ಒಂದು ಸಿರೀಂಜ್ಗೆ ಏನಿಲ್ಲವೆಂದರೂ 1 ಸಾವಿರ ರೂ. ಬೆಲೆ ಇದೆ ಎನ್ನಲಾಗುತ್ತಿದೆ. ಮುರ್ರಾ ಜಾತಿಯ ಎಮ್ಮೆಗಳು ಪ್ರತಿ ದಿನ 15 ಲೀ. ಹೆಚ್ಚು ಹಾಲು ಕೊಡುವುದರಿಂದ ಗಜೇಂದ್ರನಿಗೆ ಈ ಭಾಗದಲ್ಲಿ ಭಾರೀ ಬೇಡಿಕೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!