ಲಕ್ಷ್ಮೀ ಹೆಬ್ಬಾಳಕರ್ ಪಂಚಮಸಾಲಿ ಇರಬಹುದು, ಮಗ ಮೃಣಾಲ್‌ ಲಿಂಗಾಯತ ಬಣಜಿಗ: ಮುರುಗೇಶ್ ನಿರಾಣಿ ಟಾಂಗ್!

ಹೊಸದಿಗಂತ ವರದಿ ಬೆಳಗಾವಿ:

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮದುವೆ ಮುಂಚೆ ಪಂಚಮಸಾಲಿ ಆಗಿದ್ದರು. ಆದರೆ ಈಗ, ಲಿಂಗಾಯತ ಬಣಜಿಗ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ಬಳಿಕ ಅವರ ಮಗ ಪಂಚಮಸಾಲಿ ಹೇಗಾಗುತ್ತಾರೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮುರುಗೇಶ್ ನಿರಾಣಿ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪಂಚಮಸಾಲಿ ಮತಕ್ಕಾಗಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳಕರಗೆ ತಿರುಗೇಟು ನೀಡಿದರು.
ಅವರು ಮೂಲ ಖಾನಾಪುರ ತಾಲೂಕಿನ ಹಟ್ಟಿಹೊಳಿಯವರು‌ . ಮದುವೆ ಮುಂಚೆ ಲಕ್ಷ್ಮೀ ಹಟ್ಟಿಹೊಳಿ ಪಂಚಮಸಾಲಿ ಸಮುದಾಯದವರಾಗಿದ್ದರು. ಈಗ ಲಿಂಗಾಯತ ಬಣಜಿಗ ಸಮುದಾಯದ ರವೀಂದ್ರ ಹೆಬ್ಬಾಳಕರ ಅವರನ್ನು ಮದುವೆಯಾಗಿದ್ದಾರೆ. ಹೀಗಾಗಿ, ಅವರ ಮಗ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಪಂಚಮಸಾಲಿ ಎಂದು ಹೇಳುತ್ತಾ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ನಿರಾಣಿ ಆರೋಪಿಸಿದರು.

ರಾಜೀನಾಮೆ ಕೊಡಲಿ…..
ಲಕ್ಷ್ಮೀ ಹೆಬ್ಬಾಳಕರ್ ಅವರು ಚುನಾವಣೆಯಲ್ಲಿ ಗೆದ್ದ ನಂತರ ಮೂರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸುತ್ತೇನೆ‌. ಆಗ ನಿರಾಣಿಯವರು ನನಗೆ ಬಂಗಾರದ ಬಳೆ ತೊಡಿಸಿ ಸನ್ಮಾನಿಸಬೇಕೆಂದು ಸವಾಲು ಹಾಕಿದ್ದರು. ಸರ್ಕಾರ ಬಂದು ವರ್ಷವಾಗುತ್ತಾ ಬಂದಿದೆ. ಹೀಗಾಗಿ, ಈಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕು. ನಾನು ಒಂದು ಕೆ.ಜಿ. ಬಂಗಾರದ ಆಭರಣ ತಂದು ಸಮಾಜದ ಸಮ್ಮುಖದಲ್ಲಿ ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಮುರುಗೇಶ್ ನಿರಾಣಿ ಪ್ರತಿ ಸವಾಲು ಹಾಕಿದ್ದಾರೆ.

ಮಹಾನಗರ ಜಿಲ್ಲಾ ಅಧ್ಯಕ್ಷ್ಯೆ ಗೀತಾ ಸುತಾರ, ಮುಖಂಡರಾದ ಮುತಾಲಿಕ್ ದೇಸಾಯಿ, ಧನ್ಯಕುಮಾರ ಪಾಟೀಲ, ಎಂ.ಬಿ.ಜಿರಲಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!