ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಲಾಲ್‌ಬಾಗ್‌ನಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನ ರದ್ದಾಗಿದೆ.
ಕಳೆದ ಮೂರು ಬಾರಿಯಿಂದಲೂ ಕೋವಿಡ್ ಕಾರಣದಿಂದ ಫಲಪುಷ್ಪ ಪ್ರದರ್ಶನ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಅದ್ಧೂರಿ ಪ್ರದರ್ಶನಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿತ್ತು.
ಆದರೆ ಫಲಪುಷ್ಪ ಪ್ರದರ್ಶನದ ಮೇಲೆ ಕೊರೋನಾ ನೆರಳು ಬಿದ್ದಿದ್ದು, ಈ ಬಾರಿಯೂ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುವುದು ಅಸಾಧ್ಯವಾಗಿದೆ. ಈ ಬಾರಿ ಗಾಜಿನ ಮನೆಯಲ್ಲಿ ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಹೂವಿನ ಪ್ರತಿಕೃತಿ ನಿರ್ಮಿಸಲು ಎಲ್ಲ ತಯಾರಿ ನಡೆದಿತ್ತು ಎನ್ನಲಾಗಿದೆ. ಮೂರು ಬಾರಿಯಿಂದ ಪ್ರದರ್ಶನ ನಡೆಯದೇ ಇದ್ದ ಕಾರಣ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ಅದ್ಧೂರಿಯಾಗಿ ಎಲ್ಲ ತಯಾರಿ ಮಾಡಿ, ನಷ್ಟ ತುಂಬಿಕೊಳ್ಳುವ ಯೋಜನೆ ಇತ್ತು. ಜತೆಗೆ 10 ದಿನಗಳ ಕಾಲ ಪ್ರದರ್ಶನ ನಡೆಸುವ ಪ್ಲಾನ್ ಮಾಡಲಾಗಿತ್ತು.
ಪ್ರದರ್ಶನಕ್ಕೆ ಸರ್ಕಾರದ ಅನುಮತಿ ಇದೆ. ಆದರೆ ಬಿಬಿಎಂಪಿ ಪ್ರದರ್ಶನ ಮಾಡುವುದಾದರೆ ಒಂದು ಬಾರಿಗೆ 300-500 ಜನರನ್ನು ಮಾತ್ರ ಒಳಗೆ ಕಳಿಸಬೇಕು ಎಂದು ಸೂಚಿಸಿದೆ. ಆದರೆ ಈ ರೀತಿ ನಿಭಾಯಿಸುವುದು ಕೊಂಚ ಕಷ್ಟ. ನಾಲ್ಕು ದ್ವಾರದಲ್ಲಿ ಇಡೀ ದಿನ ಜನ ಬರುತ್ತಾರೆ. ರಜೆ ದಿನಗಳಲ್ಲಿ ಹೆಚ್ಚಿನ ಮಂದಿ ಆಗಮಿಸುತ್ತಾರೆ. ಗುಂಪನ್ನು ಕಂಟ್ರೋಲ್ ಮಾಡುವುದು ಕಷ್ಟ. ಜೊತೆಗೆ ಒಂದು ಬಾರಿ ಬೆಳಗ್ಗೆ ಲಾಲ್‌ಬಾಗ್ ಒಳಬಂದವರು ಸಂಜೆ ವಾಪಾಸಾಗುತ್ತಾರೆ. ಅವರು ಹೊರಹೋಗುವವರೆಗೂ ಬೇರೆಯವರನ್ನು ಬಿಡುವುದು ಅಸಾಧ್ಯ. ಹೀಗಾಗಿ ದಿನಕ್ಕೆ 500 ಮಂದಿಗೆ ಮಾತ್ರ ಎಂಟ್ರಿ ಎಂದರೆ ನಷ್ಟವಾಗುತ್ತದೆ.