ಮಕ್ಕಳಿಗೆ ಕೋವಿಡ್ ಲಸಿಕೆ- ಮುಖ್ಯಮಂತ್ರಿಗಳಿಂದ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಇಲ್ಲಿನ ಮೂಡಲಪಾಳ್ಯದ ಭೈರವೇಶ್ವರನಗರ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಿಎಂ, ಹೊಸ ವರ್ಷದಲ್ಲಿ 15-18 ವರ್ಷ ಪ್ರಾಯದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆಯ ಫಲವಾಗಿ ಇಡೀ ದೇಶದಲ್ಲಿ ಇಂದು ಅಭಿಯಾನ ಆರಂಭಗೊಂಡಿದೆ. ಎಲ್ಲ ಮಕ್ಕಳು ಸುರಕ್ಷಿತವಾಗಿರುವ ಆರೋಗ್ಯ ಭಾಗ್ಯ ಎಲ್ಲರಿಗೂ ಆಗಲಿ ಎಂದು ಹಾರೈಸುತ್ತೇನೆ ಎಂದರು.

ಲಸಿಕೆ ಅಭಿಯಾನಕ್ಕೆ ಸಹಕರಿಸಿ
15-18 ವರ್ಷದ ಮಕ್ಕಳ ಆರೋಗ್ಯ ಬಹಳ ಮುಖ್ಯ. ರಾಜ್ಯದ್ಯಂತ ಇಂದು 4.41 ಲಕ್ಷ ಹಾಗೂ ಬೆಂಗಳೂರಿನಲ್ಲಿ 30 ಸಾವಿರ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್ ಅನ್ನು 28 ದಿನಗಳ ನಂತರ ನೀಡಲಾಗುವುದು. ಜ. 10ರ ನಂತರ 60 ವರ್ಷ ಮೇಲ್ಪಟ್ಟವರಿಗೆ ಮತ್ತು ತೀವ್ರಥರದ ಕಾಯಿಲೆ ಇರುವವರಿಗೆ ಲಸಿಕೆ ನೀಡಲಾಗುವುದು. ಕೋವಿಡ್ ವಿರುದ್ಧ ಸುರಕ್ಷಾ ಚಕ್ರವನ್ನು ಕನ್ನಡಿಗರಿಗೆ, ವಿಶೇಷವಾಗಿ ಮಕ್ಕಳಿಗೆ ನೀಡಬೇಕು. ಅದಕ್ಕೆ ಪೋಷಕರು, ಮಕ್ಕಳು, ಶಿಕ್ಷಕರೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ ನಿಯಂತ್ರಣಕ್ಕೆ ಗಂಭೀರ ಯೋಜನೆ
ಮೂರನೇ ಅಲೆ ಎಂದು ಬಿಂಬಿತವಾಗಿರುವ ಒಮಿಕ್ರಾನ್ ಅನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಗಡಿ ಭದ್ರತೆ, ಆರ್.ಟಿ.ಪಿ.ಸಿ.ಆರ್. ಕಡ್ಡಾಯ, ಎರಡು ಡೋಸ್ ಲಸಿಕೆಯಾಗಿರುವ ಬಗ್ಗೆ ಪರಿಶೀಲನೆ, ಸಂಪರ್ಕ ಪತ್ತೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಒಂದು ವಾರದಲ್ಲಿ ಪ್ರಕರಣಗಳು ಉಲ್ಬಣಗೊಂಡಿದ್ದು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಇದನ್ನು ವಿಭಿನ್ನವಾಗಿ ನಿಭಾಯಿಸಬೇಕಿದೆ. ಬೆಳೆಯುತ್ತಿರುವ ಆರ್ಥಿಕತೆಯನ್ನು ಗಮನಿಸಿ, ಕೋವಿಡ್ ಹರಡದಂತೆ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ. ಕರ್ನಾಟಕದ ಮಹಾಜನತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದರು.

ಕೊರೋನಾ ಸಾಂಕ್ರಾಮಿಕ ಸೋಂಕನ್ನು ನಾವು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಮಗೆ ಮೊದಲ ಮತ್ತು ಎರಡನೇ ಅಲೆ ಬಹಳಷ್ಟು ಸವಾಲುಗಳನ್ನು ಒಡ್ಡಿತ್ತು. ಕೋವಿಡ್ ಸೋಂಕು ಏನು, ಯಾವ ರೀತಿ ಹರಡುತ್ತದೆ ಎಂಬುದು ಗೊತ್ತಿಲ್ಲ. ಉಲ್ಬಣವಾದಾಗ ಔಷಧೋಪಚಾರ ಈ ಎಲ್ಲ ಸವಾಲುಗಳಿರುವ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿ ಮುಂಚೂಣಿಯಲ್ಲಿ ನಿಂತು ಅದರ ವಿರುದ್ಧ ಸಮರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೇವಲ ಆರೋಗ್ಯ ದೃಷ್ಟಿಯಿಂದ ಮಾತ್ರವಲ್ಲ. ಇದರಿಂದ ಪರಿಣಾಮ ಆಗಿರುವಂತಹ ಆರ್ಥಿಕ ಸವಾಲುಗಳನ್ನು ಕೂಡ ಎದುರಿಸಲು ಪ್ರಧಾನಿಯವರು ಕಾಲ ಕಾಲಕ್ಕೆ ತೆಗೆದುಕೊಂಡ ತೀರ್ಮಾನಗಳು ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿದೆ. ವಿದೇಶಗಳು ಲಸಿಕೆ ನೀಡಲು ಪರದಾಡುವ ಸಂದರ್ಭದಲ್ಲಿ 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಸಾರ್ವಜನಿಕರಿಗೆ ಶೇ. 97ರಷ್ಟು ಮೊದಲ ಡೋಸ್ ನೀಡಿರುವುದು ದಾಖಲೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಕೆ. ಸುಧಾಕರ್, ವಿ. ಸೋಮಣ್ಣ, ಬಿ.ಎ. ಬಸವರಾಜ ಮತ್ತು ಅಧಿಕಾರಿಗಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!