ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಪ್ರಾಥಮಿಕ ಸದಸ್ಯತ್ವ,ವಿವಿಧ ಹುದ್ದೆಗೂ ರಾಜೀನಾಮೆ ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ತೆರಳಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಸಮ್ಮುಖದಲ್ಲಿ ಹೂ ಬಿಟ್ಟು, ಕೈಯನ್ನು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹಿಡಿದಿದ್ದಾರೆ. ಈ ಮೂಲಕ ಬಿಜೆಪಿಗೆ ಗುಡ್ ಬೈ ಹೇಳಿಕ, ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತಲಾಗಿ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತಮಗೆಲ್ಲ ಆಶ್ಚರ್ಯ ಎನಿಸಬಹುದು. ಇಡೀ ರಾಜ್ಯದಲ್ಲಿ 63 ಕ್ಷೇತ್ರದಲ್ಲಿ ಬಿಜೆಪಿಯ ನಾಯಕರು, ಬಂಡಾಯವೆದ್ದು ಜೆಡಿಎಸ್ ಸೇರುತ್ತಿದ್ದಾರೆ. ಶೇ.90ರಷ್ಟು ಮಂದಿ ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ ಎಂದರು.
ಲಕ್ಷ್ಮಣ್ ಸವದಿ ಮಾಜಿ ಡಿಸಿಎಂ ಆಗಿದ್ದವರು. ಐದು ವರ್ಷಗಳ ಪರಿಷತ್ ಸದಸ್ಯರಾಗಿದ್ದವರು. ಶಾಸಕರಾಗಿ, ಸಹಕಾರ ಸಚಿವರಾಗಿದ್ದವರು. ಬಿಜೆಪಿ ರಾಷ್ಟ್ರ ನಾಯಕರ ಜೊತೆಗೊ ಸಂಪರ್ಕ ಹೊಂದಿದ್ದವರು. ಇಂತವರಿಗೆ ನುಡಿದಂತೆ ನಡೆಯದೇ ಟಿಕೆಟ್ ನೀಡಿಲ್ಲ. ಆ ಬೇಸರದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅವರಿಗೆ ನಾನು ಪಕ್ಷದ ಅಧ್ಯಕ್ಷನಾಗಿ ತುಂಬು ಹೃದಯದ ಸ್ವಾಗತವನ್ನು ಕೋರುತ್ತಿದ್ದೇನೆ ಎಂದರು.