ಕಡೂರು ಜನಸಂಕಲ್ಪ ಯಾತ್ರೆ: ಕಾಂಗ್ರೆಸ್ಸಿನ ಹಿಂದು ವಿರೋಧ, ಭ್ರಷ್ಟಾಚಾರಗಳನ್ನು ನೆನಪಿಸಿದ ಕಮಲ ಪಡೆಯ ನಾಯಕರು…

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಆಗಬಯಸುವ ಸಿದ್ರಾಮಣ್ಣ ಮೊದಲು ತಮ್ಮದೇ ಪಕ್ಷದ ಡಿ.ಕೆ. ಶಿವಕುಮಾರ್ ಅವರ ಬೆಂಬಲವನ್ನು ಮೊದಲು ಪಡೆಯಲಿ. ಆಮೇಲೆ ಜನಬೆಂಬಲ ಕೇಳಬೇಕು ಎಂದು ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ಜನಸಂಕಲ್ಪ ಯಾತ್ರೆ ವೇಳೆ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 2013ರಲ್ಲಿ ಸಿಎಂ ಆಗಿದ್ದ ಸಿದ್ರಾಮಣ್ಣ ಅವರು 5 ವರ್ಷದ ಅಧಿಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಎಸ್‍ಸಿ- ಎಸ್‍ಟಿ, ಹಾಸಿಗೆ, ದಿಂಬು, ಬಿಡಿಎ ಸೇರಿ ಎಲ್ಲೆಡೆ ಭ್ರಷ್ಟಾಚಾರವನ್ನು ಜನರು ಮರೆತಿಲ್ಲ. ಸಾಮಾಜಿಕ ಸಾಮರಸ್ಯ ಹಾಳು ಮಾಡಿದ್ದರಿಂದ ಹಿಂದೂಗಳ ಕೊಲೆ ಆದುದನ್ನು ಜನರು ಮರೆತಿಲ್ಲ.

ಪ್ರಸ್ತುತ ಅಧಿಕಾರವಧಿಯ ಕೊಡುಗೆಗಳನ್ನು ಪಟ್ಟಿ ಮಾಡಿದ ಅವರು- “ಅತಿವೃಷ್ಟಿ, ಮನೆ ಹಾನಿಗೆ ಪರಿಹಾರ ಹೆಚ್ಚಳ ಮಾಡಲಾಗಿದೆ. ರೈತರ ಸಂಕಷ್ಟಕ್ಕೆ ಸರಕಾರ ಸದಾ ಕಾಲ ಸ್ಪಂದಿಸಿದೆ. ಕೇಂದ್ರ ಸರಕಾರ ಕೊಡುವ ಬೆಳೆ ಪರಿಹಾರವನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರಿಂದ 17 ಲಕ್ಷ ರೈತರಿಗೆ ಪ್ರಯೋಜನವಾಗಿದೆ. ಅತಿ ಶೀಘ್ರವಾಗಿ ಹಣ ಬಿಡುಗಡೆ ಮಾಡಿದ್ದೇವೆ. 130 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಎಲ್ಲ ಮನೆಗೂ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಕಾರ್ಯಕ್ಕೆ ನಮ್ಮ ಧೈರ್ಯಶಾಲಿ ಪ್ರಧಾನಿ ನರೇಂದ್ರ ಮೋದಿಜಿ ಮುಂದಾಗಿದ್ದಾರೆ.

ಇದು ಪ್ರಮುಖ ಸಂಕಲ್ಪ. 10 ಕೋಟಿ ಮನೆಗಳ ಪೈಕಿ 7.5 ಕೋಟಿ ಮನೆಗೆ ನೀರು ಪೂರೈಕೆ ಈಗಾಗಲೇ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಹೊಸದಾಗಿ 30 ಲಕ್ಷ ಮನೆಗಳಿಗೆ ನೀರು ಒದಗಿಸಿದ್ದು, ಇದು ನಮ್ಮ ಬದ್ಧತೆಯ ಪ್ರತೀಕ” ಎಂದರು. ಹಿಂದಿನ ಪ್ರಧಾನಿಗಳು, ಕಾಂಗ್ರೆಸ್ ಸರಕಾರಗಳು ಇದನ್ನು ಯಾಕೆ ಮಾಡಿಲ್ಲ ಎಂದು ಕೇಳಿದರು.

5 ವರ್ಷ ಶಾಲಾ ಕೊಠಡಿ ನಿರ್ಮಿಸಲು ನೀವ್ಯಾಕೆ ಮುಂದಾಗಿಲ್ಲ ಎಂದು ಸಿದ್ರಾಮಣ್ಣ ಉತ್ತರಿಸಲಿ ಎಂದು ಸವಾಲು ಹಾಕಿದ ಅವರು, ನಾವು 8 ಸಾವಿರ ಶಾಲಾ ಕೊಠಡಿಗಳನ್ನು ಒಂದೇ ವರ್ಷ ನಿರ್ಮಿಸುತ್ತಿದ್ದೇವೆ; ಇದು ಜನಸ್ಪಂದನೆಯ ಸರಕಾರ ಎಂದು ತಿಳಿಸಿದರು.

“ಕುರಿಗಾಹಿಗಳನ್ನು ಸಿದ್ರಾಮಣ್ಣ ನೆನಪಿಸಿಕೊಳ್ಳಲಿಲ್ಲ. ನಾವು ಆ ಎಲ್ಲ ಕುರಿಗಾರರಿಗೆ 20 ಕುರಿ ಒಂದು ಮೇಕೆ ನೀಡುತ್ತಿದ್ದು, 354 ಕೋಟಿ ಮಂಜೂರು ಮಾಡಿದ್ದೇವೆ.” ಎಂದರು ಮುಖ್ಯಮಂತ್ರಿ ಬೊಮ್ಮಾಯಿ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿದ್ದೇವೆ. 50 ಸಾವಿರ ತಾಂಡಾಗಳ ಜನರಿಗೆ ಹಕ್ಕುಪತ್ರ ನೀಡುತ್ತಿದ್ದೇವೆ. ಎಸ್‍ಸಿ ಎಸ್‍ಟಿ ಹಾಸ್ಟೆಲ್ ಸಂಖ್ಯೆ ಹೆಚ್ಚಳ, 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿರುವುದು ನಮ್ಮ ನೈಜ ಬದ್ಧತೆಯ ಪ್ರತೀಕ ಎಂದು ತಮ್ಮ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ವಿವರಿಸಿದರು.

ಯಡಿಯೂರಪ್ಪ ವಿಶ್ವಾಸ

ಚುನಾವಣೆಗೆ ಇನ್ನು ಕೇವಲ 4 ತಿಂಗಳಷ್ಟೇ ಬಾಕಿ ಇದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದು ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
1 ಲಕ್ಷ ಸಾಲಮನ್ನಾ, ಆಯುಷ್ಮಾನ್ ಯೋಜನೆ, ಫಸಲ್ ವಿಮೆ ಯೋಜನೆ, ಮೆಗಾ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹಣ, ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಪರಿಹಾರ ಕೊಡುಗೆ ಸೇರಿ ಅನೇಕ ಜನಪರ ಯೋಜನೆ ಜಾರಿ ಮಾಡಿದ್ದನ್ನು ಅವರು ನೆನಪಿಸಿದರು. ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿ 20 ಲಕ್ಷಕ್ಕೂ ಹೆಚ್ಚು ಜನ ಹೆಣ್ಮಕ್ಕಳಿಗೆ ನೆರವಾಗಿದ್ದೇನೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿ ಹಣ ಕೊಟ್ಟಿದ್ದೇವೆ. ಇದನ್ನೆಲ್ಲ ಜನರಿಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

“ಧರ್ಮ ಒಡೆಯುವವರಿಗೆ ಮತ ಬೇಡ”

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಧರ್ಮ ಒಡೆಯುವವರು, ಭ್ರಷ್ಟರು, ಸುಳ್ಳು ಹಂಚುವವರು, ದೇಶ ಒಡೆಯುವವರನ್ನು, ಧರ್ಮಸ್ಥಳಕ್ಕೆ ಹೇಗ್ಹೇಗೋ ಹೋಗುತ್ತೇವೆ ಎನ್ನುವವರನ್ನು ಅಧಿಕಾರದ ಸಮೀಪಕ್ಕೂ ಬಿಡದಿರಿ ಎಂದು ಮನವಿ ಮಾಡಿದರು.
ಬಿಜೆಪಿಯ ಎದುರು ಬಂದರೆ ರಾಜಕೀಯವಾಗಿ ಕಾಂಗ್ರೆಸ್‍ನವರು ಉಳಿಯಲಾರರು ಎಂದು ಎಚ್ಚರಿಸಿದರು. ಕೇಂದ್ರ- ರಾಜ್ಯಗಳಲ್ಲಿ ಸರಕಾರದಿಂದ ನಡೆಯುತ್ತಿರುವ ಜನಪರ ಕಾರ್ಯಗಳನ್ನು ವಿವರಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮನವಿ ಮಾಡಿದರು.

ಜಾತಿ ರಾಜಕಾರಣ ನಮ್ಮದಲ್ಲ: ನೀತಿ ಮೇಲೆ ರಾಜಕಾರಣ ನಮ್ಮದು ಎಂದ ಅವರು, ನಾವು ಕೆಲಸ ಮಾಡಿ ಕೆಲಸ ತೋರಿಸಿ ಮತ ಕೇಳಲು ಬಂದಿದ್ದೇವೆ. ಇದನ್ನು ಗಮನದಲ್ಲಿಡಿ ಎಂದು ಜನರಿಗೆ ಕಿವಿಮಾತು ಹೇಳಿದರು. ಚಿಕ್ಕಮಗಳೂರಿಗೆ ಪ್ರತ್ಯೇಕ ಮಿಲ್ಕ್ ಯೂನಿಯನ್ ಆಗಲಿದೆ ಎಂದು ಅವರು ಪ್ರಕಟಿಸಿದರು.
ಕೇಸರಿ ಅಲೆ ಮೇಲೆ ರಾಜಕೀಯ ಮಾಡುತ್ತೇವೆ. ತಾಕತ್ತಿದ್ದರೆ ಎದುರಿಸಿ ಎಂದು ವಿರೋಧ ಪಕ್ಷದವರಿಗೆ ಅವರು ಸವಾಲೆಸೆದರು.
ರಾಜ್ಯದ ಸಚಿವ ಬೈರತಿ ಬಸವರಾಜು ಅವರು ಮಾತನಾಡಿ, ಬಿಜೆಪಿಯನ್ನು ಬೆಂಬಲಿಸಿ ಯುವಶಕ್ತಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಸಚಿವರು, ಶಾಸಕರಾದ ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ, ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!