ಹೊಸದಿಗಂತ ವರದಿ, ಮಂಡ್ಯ
ಶಾಲಾ ಸಮವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಂಪೂರ್ಣ ಕಾಂಗ್ರೆಸ್ ಗೊಂದಲದಲ್ಲಿದೆ ಎಂದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯಗೆ ಆಗುತ್ತಿರುವ ತಳಮಳದಿಂದ ಏನು ಹೇಳಬೇಕು ಎಂಬುದೇ ತೋಚುತ್ತಿಲ್ಲ ಎನ್ನಿಸುತ್ತಿದೆ. ಶಾಲಾ ಸಮವಸ್ತ್ರದ ಪರ ನಿಲ್ಲಬೇಕೋ, ವಿರೋಧಿಸಬೇಕೊ ಅವರಿಗೆ ತಿಳಿಯುತ್ತಿಲ್ಲ. ಕಾಂಗ್ರೆಸ್‌ನವರಿಗೆ ಯಾವೊಂದರಲ್ಲೂ ಸ್ಪಷ್ಟತೆಯೆನ್ನುವುದೇ ಇಲ್ಲದಿರುವುದರಿಂದ ಯಾವ ನಿಲುವಿಗೆ ಬರುವುದು ಎಂಬ ಗೊಂದಲದಲ್ಲಿದ್ದಾರೆ ಎಂದರು.
ಕಾನೂನು ಎಲ್ಲರಿಗೂ ಒಂದೇ. ಅದನ್ನು ಎಲ್ಲರೂ ಪಾಲನೆ ಮಾಡಬೇಕು. ಒಂದು ಸಮುದಾಯವನ್ನು ಓಲೈಕೆ ಮಾಡೋದನ್ನು ಬಿಡಿ. ಕಾನೂನು ಗೌರವಿಸಿ ಸಮಸ್ಯೆಗಳು ಬಗೆಹರಿಯುತ್ತವೆ. ನಾಡಿಗೆ ಅವಮಾನ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು. ಕನ್ನಡ ನಾಡು ಎಲ್ಲಾ ಕ್ಷೇತ್ರಗಳಲ್ಲೂ ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ. ಅದಕ್ಕೆ ಮಸಿ ಬಳಿಯುವಂತಹ ಕೆಲಸ ಮಾಡಬೇಡಿ ಎಂದು ಹೇಳಿದರು.
ನಾವು ಅಸಹಾಯಕರಲ್ಲ:
ನಮ್ಮನ್ನ ಕಡೆಗಣಿಸಬೇಡಿ, ಅಸಹಾಯಕರು ಅಂದುಕೊಳ್ಳಬೇಡಿ ಎಂದು ಕೋಮು ಪ್ರಚೋದನೆಯಲ್ಲಿ ತೊಡಗಿರುವವರಿಗೆ ಸಚಿವ ಅಶ್ವತ್ಥ ನಾರಾಯಣ್ ಎಚ್ಚರಿಕೆ ನೀಡಿದರು.
ಧರ್ಮಕ್ಕಿಂತ ಮಿಗಿಲಾಗಿ ನಾವು ಭಾರತೀಯರು, ಒಳ್ಳೆಯ ಸಂಬಂಧ ಇಟ್ಟಿಕೊಂಡು ಬದುಕಿರುವವರು. ಕುವೆಂಪು ಹೇಳಿದಂತೆ ನಾವು ವಿಶ್ವಮಾನವರು. ನಮಗೆ ಯಾರ ಜತೆ ದ್ವೇಷ, ವೈಮನಸ್ಸು ಇಲ್ಲ. ದ್ವೇಷ, ವೈಮನಸ್ಸು ಬೆಳಸುವವರಿಗೆ ಪೂರಕವಾಗಿ ಇರಬೇಡಿ. ಅಲ್ ಖೈದಾ ಹೇಳಿಕೆಗೆ ಸೊಪ್ಪು ಹಾಕುವಂತ ಕೆಲಸ ಮಾಡಬೇಡಿ. ಅಲ್ಪಸಂಖ್ಯಾತರು ಅಲ್ ಖೈದಾ ಹೇಳಿಕೆಯನ್ನ ಖಂಡಿಸಬೇಕಿತ್ತು. ನಮಗೂ ಇದಕ್ಕೂ ಸಂಬಂಧ ಇಲ್ಲ ಅಂತ ಹೇಳಬೇಕಿತ್ತು. ಈ ರೀತಿ ಭಾವನೆ ತೋರುವುದು ತಪ್ಪಾಗುತ್ತದೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ