ಲೆಬನಾನ್- ಇಸ್ರೇಲ್ ಯುದ್ಧದ ಕಾರ್ಮೋಡ: ಗಡಿಯಲ್ಲಿ 600 ಭಾರತೀಯ ಯೋಧರ ನಿಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇಸ್ರೇಲ್ ಹಾಗೂ ಲೆಬನಾನ್‌ನ ಹಿಜ್ಬುಲ್ಲಾ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಈ ಹಿನ್ನೆಲೆ ಭಾರತೀಯ ಸೇನೆಯ ಯೋಧರನ್ನು ನಿಯೋಜಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಲೆಬನಾನ್‌ನ ಹಿಜ್ಬುಲ್ಲಾ ನಡುವೆ ಯುದ್ಧದಿಂದಾಗಿ ಅಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯಾವುದೇ ಕ್ಷಣದಲ್ಲಾದರೂ ಅಲ್ಲಿ ಏನು ಬೇಕಾದರೂ ನಡೆಯುವಂತಹ ಸ್ಥಿತಿ ಇದೆ. ಹೀಗಿರುವಾಗ ಅಲ್ಲಿ ಭಾರತೀಯ ಸೇನೆಯ ಯೋಧರನ್ನು ನಿಯೋಜಿಸಲಾಗಿದೆ.

ವಿಶ್ವಸಂಸ್ಥೆಯ ಶಾಂತಿ ಪಾಲನ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಇಸ್ರೇಲ್ ಲೆಬನಾನ್ ಗಡಿ ಭಾಗದಲ್ಲಿ ನಿಯೋಜಿಸಲಾಗಿದ್ದು, ಅಲ್ಲಿ ಭಾರತೀಯ ಸೇನೆ ಮಹತ್ವದ ಪಾತ್ರ ವಹಿಸಲಿದೆ.

ಇತ್ತೀಚೆಗೆ ಲೆಬನಾನ್‌ನಲ್ಲಿ ನಡೆದ ಪೇಜರ್‌ ಹಾಗೂ ವಾಕಿಟಾಕಿಗಳ ಸ್ಫೋಟದಿಂದಾಗಿ ಹಲವು ಸಾವು ನೋವುಗಳು ಸಂಭವಿಸಿದ್ದು, ಇದಾದ ನಂತರ ಲೆಬನಾನ್ನ ಹೆಜ್ಬುಲ್ಲಾ ಸಂಘಟನೆ ಹಾಗೂ ಇಸ್ರೇಲ್‌ ನಡುವಿನ ಸಂಬಂಧ ಯುದ್ಧದಂಚಿಗೆ ಬಂದು ನಿಂತಿದೆ. ಈ ವಾತಾವರಣದಲ್ಲಿ ಅಂದಾಜು 600 ಭಾರತೀಯ ಯೋಧರು ಗಡಿ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆಯ ಬಗ್ಗೆ ತುಂಬಾ ಹತ್ತಿರದಿಂದ ಪರಿಶೀಲಿಸುತ್ತಿದ್ದಾರೆ.

ಭಾರತೀಯ ಯೋಧರು ಬ್ಲೂ ಲೈನ್‌ನಲ್ಲಿ ನಿಯೋಜಿಸಲ್ಪಟ್ಟಿದ್ದು, ಈ ಬ್ಲೂಲೈನ್‌ ಇಸ್ರೇಲ್ ಹಾಗೂ ಲೆಬನಾನ್‌ ನಡುವಣ ಗಡಿಯಾಗಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನ ಪಡೆಯ ಇಂಟಿರಿಮ್‌ ಪೋರ್ಸ್‌ ಇನ್ ಲೆಬನಾನ್‌ (UNIFIL) ಭಾಗವಾಗಿ ನಮ್ಮ ಭಾರತೀಯ ಯೋಧರು ಅಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ಈ ಹಿಂಸೆ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮಾಡುವುದು ಹಾಗೂ ಹಿಂಸಾಚಾರವನ್ನು ತಡೆಯುವುದು ಈ ಪಡೆಯ ಗುರಿಯಾಗಿದೆ. ಇಲ್ಲಿ ಭಾರತೀಯ ಯೋಧರು ನೇರವಾಗಿ ಯುದ್ಧದಲ್ಲಿ ಭಾಗಿಯಾಗುವುದಿಲ್ಲ, ಆದರೆ ಇಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ಪ್ರಚೋದನೆಗಳನ್ನು ತಡೆಯುವುದರ ಬಗ್ಗೆ ಅವರು ಗಮನ ಹರಿಸುತ್ತಾರೆ. ಅದರಲ್ಲೂ ಅಲ್ಲಿ ಇರುವ ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಕಾಪಾಡುವುದು ಹಾಗೂ ಶಾಂತಿ ಕಾಯ್ದುಕೊಳ್ಳುವ ಕಾರ್ಯಾಚರಣೆ ಸಹಜವಾಗಿ ನಡೆದುಕೊಂಡು ಹೋಗುವಂತೆ ಮಾಡುವುದು ಅವರ ಪ್ರಾಥಮಿಕ ಜವಾಬ್ದಾರಿಯಾಗಿದೆ. ಅಲ್ಲದೇ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ಕಾಪಾಡುವುದು ಕೂಡ ಅವರ ಜವಾಬ್ದಾರಿಯಾಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!