ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮೇಕೆದಾಟು ಯೋಜನೆಗಾಗಿ ನಡೆಸಿದ ಪಾದಯಾತ್ರೆಯಲ್ಲಿ ಯಾರ‍್ಯಾರು ಸಂಘಟಕರು, ಪ್ರಮುಖರು ಯಾರು ಕಾನೂನು ಉಲ್ಲಂಘನೆ ಮಾಡಿದ್ದಾರೋ ಅವರ ಮೇಲೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ನಡೆಸುವ 30 ಮಂದಿರ ವಿರುದ್ಧ ಎಐಆರ್ ದಾಖಲಾದ ಬಗ್ಗೆ ಸುದ್ದಿಗಾರರಿಗೆ ಅವರಿಂದು ಪ್ರತಿಕ್ರಿಯಿಸಿದರು.
ಸರಕಾರ ಜನಸಾಮಾನ್ಯರ ಮೇಲೆ ಕೋವಿಡ್ ನಿಯಮ ಉಲ್ಲಂಘನೆ ಎಂದು ಕೇಸ್ ದಾಖಲಿಸಲಾಗುತ್ತಿದೆ, ಆದರೆ ಸಾವಿರಾರು ಮಂದಿ ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ. ಇಲ್ಲಿ ಜನಸಾಮಾನ್ಯರಿಗೊಂದು ಕಾನೂನು ರಾಜಕೀಯ ಪಕ್ಷದ ನೇತಾರರಿಗೊಂದು ಕಾನೂನಾ? ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ಎಷ್ಟೇ ದೊಡ್ಡ ಲೀಡರ್ ಇರಲಿ, ಸಾಮಾನ್ಯ ಪ್ರಜೆಯೇ ಆಗಿರಲಿ. ಇದರಲ್ಲಿ ಯಾವುದೇ ಬೇಧ ಭಾವವಿಲ್ಲ. ಕಾನೂನು ಎಲ್ಲರಿಗೂ ಒಂದೇ, ಕಾನೂನಿನಂತೆ ಕ್ರಮ ಆಗುತ್ತದೆ ಎಂದರು.
ಇಲಾಖೆಯ ಔದಾರ್ಯ-ಕಾಂಗ್ರೆಸ್ ಸಂಸ್ಕೃತಿ:
ಆರೋಗ್ಯ ತಪಾಸಣೆಗೆಂದು ಹೋಗಿದ್ದ ಆರೋಗ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹರಿಹಾಯ್ದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನಾವು ಅವರ ಆರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಅವರು ಸುದೀರ್ಘವಾಗಿ ನಡೆದಿರುವ ಸಂದರ್ಭದಲ್ಲಿ ಅವರೊಬ್ಬರು ಅಲ್ಲ, ಬಹುತೇಕ ಅಲ್ಲಿರುವ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಬೇಕು. ಇದು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಕರ್ತವ್ಯ ಮತ್ತು ಔದಾರ್ಯ. ಇದನ್ನು ಅರ್ಥ ಮಾಡಿಕೊಳ್ಳದೇ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದನ್ನು ಏನು ಮಾಡಲು ಆಗಲ್ಲ, ಅದು ಅವರ ಸಂಸ್ಕೃತಿ ಎಂದರು.
ಕೋವಿಡ್ ನಿಯಮ ಸಡಿಲಿಕೆ ಇಲ್ಲ
ಕೋವಿಡ್ ವ್ಯಾಪಿಸುತ್ತಲೇ ಇದೆ. 12ಸಾವಿರ ಪ್ರಕರಣಗಳು ಒಂದೇ ದಿನ ಆಗಿವೆ, ಬೆಂಗಳೂರಿನಲ್ಲಿ 9ಸಾವಿರಕ್ಕೂ ಅಧಿಕ ಪ್ರಕರಣಗಳಿವೆ. ರಾಜ್ಯದ ಪಾಸಿಟಿವಿಟಿ ದರ ಶೇ. 6.8 ಆಗಿದೆ, ಬೆಂಗಳೂರಿನಲ್ಲಿ ಶೇ. 10 ದಾಟಿದೆ. ದೇಶದಲ್ಲಿಯೇ ಕರ್ನಾಟಕ ಕೋವಿಡ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಿರುವಾಗ ಕೋವಿಡ್ ಸಂಬಂಧ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಸಂಕ್ರಾಂತಿ ವೇಳೆಗೆ ಕೋವಿಡ್ ನಿಯಮ ಸಡಿಲಿಕೆ ಕುರಿತ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.