Monday, October 3, 2022

Latest Posts

ವಕೀಲ ವೃತ್ತಿ ವ್ಯಾಪಾರವಲ್ಲ: ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ

ಹೊಸದಿಗಂತವರದಿ ಹುಬ್ಬಳ್ಳಿ:
ವಕೀಲ ವೃತ್ತಿ ವ್ಯಾಪಾರವಲ್ಲ. ಇದೊಂದು ಜವಾಬ್ದಾರಿಯುತ ವೃತ್ತಿಯಾಗಿದೆ. ಇದನ್ನು ಹಣಕ್ಕಾಗಿ ಮಾಡದೆ, ಸೇವಾ ಮನೋಭಾವದಿಂದ ಮಾಡಬೇಕು ಎಂದು‌ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.

ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಜ್ಯಮಟ್ಟದ 9ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.‌

ನ್ಯಾಯಾಲಯವೆಂದರೆ ಉತ್ಸುಕತೆಯಿಂದ ಕೂಡಿರುತ್ತದೆ. ಸಂಶೋಧನೆಗಿಂತಲೂ ಶ್ರೇಷ್ಠವಾದದ್ದು ನ್ಯಾಯಾಲಯದ ಕೆಲಸ. ಜೀವನದ ಎಲ್ಲ ಘಟನೆಗಳನ್ನು ನ್ಯಾಯಾಲಯದಲ್ಲಿ ಕಾಣಬಹುದು. ಕಾನೂನು ಶಾಲೆ ಹಾಗೂ ನ್ಯಾಯಾಲಯಗಳಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ರಾಷ್ಟ್ರದ ಏಳಿಗೆಗೆ ಪೂರಕವಾಗುತ್ತದೆ. ವಕೀಲ ವೃತ್ತಿಯಲ್ಲಿ ಕಲಿಯುವುದೇ ಮುಖ್ಯ ಭಾಗವಾಗಿದೆ. ಇಲ್ಲಿ ಅಪಾರ ಪಾಂಡಿತ್ಯ ಸಂಗ್ರಹಿಸಬೇಕು. ಕಾನೂನು ಜೊತೆಗೆ ಎಲ್ಲ ವಿಷಯ, ಕ್ಷೇತ್ರ ಅಧ್ಯಯನ‌ ಹಾಗೂ ಮಾನವನ‌ ನಡುವಳಿಕೆ ತಿಳಿಯಬೇಕು. ವಕೀಲರು ಸಂವಿಧಾನದಲ್ಲಿ ಉಲ್ಲೇಖಿತವಾದ ಸಹೋದರತ್ವ, ಸಮಾನತೆ ಮುಂತಾದ ಮೌಲ್ಯಗಳಿಗೆ ತಕ್ಕಂತೆ ಬಾಳಬೇಕು. ವಕೀಲರು ಪ್ರಜ್ಞಾವಂತರಾಗಬೇಕು ಮತ್ತು ಸಮಾಜಕ್ಕೆ ದಾರಿದೀಪದಂತಿರಬೇಕು ಎಂದರು.

ಭಗವದ್ಗೀತೆಯಲ್ಲಿ ಉಲ್ಲೇಖಿಸಿದಂತೆ, ‘ಕರ್ಮೇಷು ಕೌಶಲಮ್’ ಎಂದರೆ ನಮ್ಮ ಕಾರ್ಯದಲ್ಲಿ ಕಕ್ಷಿದಾರರೊಂದಿಗೆ ಉತ್ತಮ‌ ಸಂವಹನ, ಸೌಜನ್ಯ ನಡವಳಿಕೆ ಹೊಂದಬೇಕು. ಜವಾಬ್ದಾರಿ ಹಾಗೂ ಜಾಗೃತೆಯಿಂದ ವೃತ್ತಿ ಕೈಗೊಳ್ಳಬೇಕು. ಕಲ್ಪಿತ ನ್ಯಾಯಾಲಯ ಉದಯೋನ್ಮುಖ ನ್ಯಾಯವಾದಿಗಳನ್ನು ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಇದರ‌ ಮೂಲಕ ತಿಳಿದು, ಹೆಚ್ಚಿನ ಕೌಶಲ್ಯ ಕಲಿಯಬಹುದು.  ವಾಕ್ಶುದ್ಧಿ, ಚತುರತೆ, ಪ್ರಾಯೋಗಿಕ ಕಲಿಕೆಯಿಂದ ಈ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಬಹುದು ಎಂದು ಹೇಳಿದರು.

ಕಾನೂನು ವಿವಿ ಕುಲಪತಿ ಡಾ. ಸಿ.‌ಬಸವರಾಜ ಮಾತನಾಡಿ, ಎಲ್ಲ ವೃತ್ತಿಪರರು ವೃತ್ತಿ ನಿಷ್ಠೆ ಹೊಂದಬೇಕು. ಪ್ರಸ್ತುತ ಯುವ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರ, ಜೀವನ ಶೈಲಿ ತಿಳಿಸುವುದು ಅವಶ್ಯವಾಗಿದೆ. ಹಾಗಾಗಿ ಸಂವಿಧಾನದ ಅಧ್ಯಯನ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಲಾಗಿದೆ. ವಕೀಲ ವೃತ್ತಿ‌ ನಿರಂತರ ಅಧ್ಯಯನದಿಂದ ಕೂಡಿದೆ. ಎಷ್ಟೋ ವಕೀಲರ‌ ಉತ್ತಮ‌ಜ್ಞಾನ ಹೊಂದಿದರೂ, ನಿರೂಪಣೆ ಹಾಗೂ ಪ್ರಸ್ತುತ ಪಡಿಸುವಲ್ಲಿ ವಿಫಲರಾಗುತ್ತಾರೆ. ಅದಕ್ಕಾಗಿ ಕಾನೂನು ವಿದ್ಯಾರ್ಥಿಗಳು ಕೌಶಲ್ಯಗಳಿಸಿ ನಿಪುಣರಾಗಬೇಕು ಎಂದು ಹೇಳಿದರು.

ಎರಡು‌ ದಿನಗಳ ಕಾಲ ನಡೆಯುವ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 36 ಕಾನೂನು ವಿದ್ಯಾಲಯಗಳಿಂದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಕುಲಸಚಿವ ಮಹಮ್ಮದ ಝುಬೇರ್, ಕುಲಸಚಿವ ಮೌಲ್ಯಮಾಪನ ಪ್ರೊ.‌ ಜಿ.ಬಿ.‌ಪಾಟೀಲ, ಪ್ರೊ. ರತ್ನಾ ಆರ್.‌ಭರಮಗೌಡರ ಇತರರು ಇದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!