September 4, 2026
Friday, September 4, 2026
spot_img

ಜನವಸತಿ ಪ್ರದೇಶದಲ್ಲೇ ಮೊಸಳೆ ಪ್ರತ್ಯಕ್ಷ: ಅಂಬೇವಾಡಿ ನಿವಾಸಿಗಳಲ್ಲಿ ಢವಢವ

ಹೊಸದಿಗಂತ ವರದಿ ದಾಂಡೇಲಿ:

ನಗರದ ಅಂಬೇವಾಡಿಯ ಜಿ+2 ಆಶ್ರಯ ಮನೆಗಳ ಜನವಸತಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ನಿವಾಸಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿ ಮೂಡಿಸಿದೆ.

ಜಿ+2 ಆಶ್ರಯ ಮನೆಗಳ ಸುತ್ತಮುತ್ತ ಗಿಡ-ಗಂಟಿಗಳು ದಟ್ಟವಾಗಿ ಬೆಳೆದು ನಿಂತಿದ್ದು, ಅಲ್ಲಲ್ಲಿ ಕೊಳಚೆ ಗುಂಡಿಗಳು, ತ್ಯಾಜ್ಯ ರಾಶಿ ಮತ್ತು ಮಳೆ ನೀರು ನಿಂತಿರುವುದೇ ಮೊಸಳೆ ಇಲ್ಲಿಗೆ ಬರಲು ಕಾರಣವಾಗಿದೆ ಎನ್ನಲಾಗುತ್ತಿದೆ. ಸಮರ್ಪಕ ಬೀದಿ ದೀಪಗಳಿಲ್ಲದಿರುವುದರಿಂದ ರಾತ್ರಿ ವೇಳೆ ಜನರು ಹೊರಬರಲು ಭಯಪಡುವಂತಾಗಿದೆ. ಮೊಸಳೆಯನ್ನು ಕಂಡ ಸ್ಥಳೀಯರು ಬೊಬ್ಬೆ ಹಾಕಿ ಓಡಿಸಲು ಯತ್ನಿಸಿದಾಗ ಅದು ಪಕ್ಕದ ಪೊದೆಗಳೊಳಗೆ ನುಗ್ಗಿ ಮರೆಯಾಗಿದೆ.

ಇದು ಮೊದಲ ಪ್ರಕರಣವಲ್ಲ. ಎರಡು ವರ್ಷಗಳ ಹಿಂದೆ ಉದ್ಯಮಿ ಅಂಬೇವಾಡಿಯ ಅರುಣಾದ್ರಿ ರಾವ್ ಅವರ ಮನೆಯ ಬಾಗಿಲ ಬಳಿಯೇ ಮೊಸಳೆ ಕಾಣಿಸಿಕೊಂಡಿತ್ತು. ಕಾಳಿ ನದಿ ಭಾಗದಲ್ಲಿ ಈಗಾಗಲೇ ಐವರನ್ನು ಮೊಸಳೆ ಬಲಿ‌ ಪಡೆದುಕೊಂಡಿರುವುದನ್ನು ನಗರದ ಜನತೆ ಇನ್ನೂ ಮರೆತಿಲ್ಲ.

ಇದನ್ನೂ ಓದಿ:

ವಸತಿ ಪ್ರದೇಶದ ಸುತ್ತಮುತ್ತ ಬೆಳೆದಿರುವ ಗಿಡ-ಗಂಟಿಗಳು ಮತ್ತು ಪೊದೆಗಳನ್ನು ತಕ್ಷಣವೇ ತೆರವುಗೊಳಿಸಬೇಕಾಗಿದೆ. ಇದರಿಂದ ಹಾವು, ಮೊಸಳೆಗಳಂತಹ ಜೀವಿಗಳು ಅಡಗಿಕೊಳ್ಳಲು ಅವಕಾಶವಾಗುವುದಿಲ್ಲ. ಮನೆಗಳ ಸುತ್ತ ಇರುವ ಕೊಳಚೆ ಗುಂಡಿಗಳನ್ನು ಮಣ್ಣು ಹಾಕಿ ಸಮತಟ್ಟು ಮಾಡಬೇಕು ಮತ್ತು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಬೇಕು, ಏಕೆಂದರೆ ತ್ಯಾಜ್ಯದಿಂದ ಇಲಿ, ಕಪ್ಪೆಗಳಂತಹ ಜೀವಿಗಳು ಬರುತ್ತವೆ ಮತ್ತು ಅವುಗಳನ್ನು ಹುಡುಕಿಕೊಂಡು ಮೊಸಳೆಗಳು ಬರುತ್ತವೆ.

ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ. ಸಂಜೆಯ ನಂತರ ಮಕ್ಕಳನ್ನು ಮತ್ತು ಸಾಕು ಪ್ರಾಣಿಗಳನ್ನು ಹೊರಗೆ ಬಿಡಬಾರದು. ಬೀದಿ ದೀಪಗಳ ವ್ಯವಸ್ಥೆ ಮಾಡಿ ರಾತ್ರಿ ವೇಳೆ ಎಚ್ಚರಿಕೆಯಿಂದ ಓಡಾಡಬೇಕು. ಒಂದು ವೇಳೆ ಮೊಸಳೆ ಕಂಡುಬಂದರೆ ಅದನ್ನು ಹಿಡಿಯಲು ಅಥವಾ ಓಡಿಸಲು ಹೋಗದೆ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !